ನವದೆಹಲಿ: 8 ವರ್ಷದ ಹಿಂದೆ ದೇಶಾದ್ಯಂತ ಕಿಚ್ಚು ಹೊತ್ತಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ನಿರ್ಭಯಾ ತೀರ್ಪು ಪ್ರಶ್ನಿಸಿ ದೋಷಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದ್ದು ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ, ವಿಚಾರಣೆಯ ಪೀಠದಿಂದ ದಿಢೀರ್ ಹಿಂದೆ ಸರಿದ ಕಾರಣ ಇಂದು ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಅಶೋಕ್ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರ ಪೀಠದಲ್ಲಿ ನಡೆಯಿತು.
Advertisement
ಈ ಹಿಂದೆ ಜಸ್ಟೀಸ್ ಬೊಬ್ಡೆ ಅವರ ಅಣ್ಣನ ಮಗ ಅರ್ಜುನ್ ಬೊಬ್ಡೆ ನಿರ್ಭಯಾ ತಾಯಿ ಪರವಾಗಿ ವಾದ ಮಂಡನೆ ಮಾಡಿದರು. ಹೀಗಾಗಿ ವಿಚಾರಣೆ ಪಾರದರ್ಶಕವಾಗಿ ನಡೆಯಲಿ ಎನ್ನುವ ಉದ್ದೇಶದಿಂದ ಸಿಜೆ ಬೊಬ್ಡೆ ಈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.
Advertisement
Advertisement
ಏನಿದು ಪ್ರಕರಣ?
2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಆದರೆ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆ ಆತ ಮಾತ್ರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು.
Advertisement
ಆದರೆ ಆತನ ಕ್ಷಮದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿಗಳಿಗೂ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿತ್ತು. 2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು.