ನೋ ರಿಲೀಫ್ – ಚಿದಂಬರಂಗೆ ಸುಪ್ರೀಂನಲ್ಲೂ ಸಿಗಲಿಲ್ಲ ಜಾಮೀನು

Public TV
3 Min Read
chidambaram 1

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಐಎನ್‍ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಚಿದಂಬರಂ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದ್ದು, ಈಗ ಜಾರಿ ನಿರ್ದೇಶನಾಲಯ(ಇಡಿ) ಸಹ ಚಿದಂಬರಂ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮುಂದಾಗುತ್ತಿದೆ. ಈ ಸಂಬಂಧ ಚಿದಂಬರಂ ಅವರು ಸುಪ್ರೀಂನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಭಾನುಮತಿ ಮತ್ತು ನ್ಯಾ. ಎ.ಎಸ್.ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠ ಆಗಸ್ಟ್ 29 ರಂದು ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿದ್ದರು.

ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್, ಪ್ರಾಥಮಿಕ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡುವುದು ಸರಿಯಲ್ಲ. ತನಿಖೆ ನಡೆಸುತ್ತಿರುವ ಇಡಿ ನ್ಯಾಯಾಲಯದಲ್ಲಿ ತನಿಖಾ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯವಿಲ್ಲ. ಆರ್ಥಿಕ ಅಪರಾಧಗಳು ವಿವಿಧ ಆಯಾಮಗಳಲ್ಲಿ ತನಿಖೆಯಾಗಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.

ಕೋರ್ಟ್ ಮುಚ್ಚಿದ ಲಕೋಟೆಯಲ್ಲಿ ಈ ಪ್ರಕರಣಕ್ಕೆ ಸಂಬಂಧ ದಾಖಲೆಗಳನ್ನು ಸಲ್ಲಿಸಬೇಕೆಂದು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತು. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆ ಚಿದಂಬಂರಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಐಎನ್‍ಎಕ್ಸ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ಹೂಡಲಾಗಿರುವ ಎಲ್ಲ ಅರ್ಜಿಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದರು.

ಏರ್‍ಸೆಲ್-ಮ್ಯಾಕ್ಸಿಸ್ ಸಂಸ್ಥೆಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪದ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿದ್ದು, ಈ ಪ್ರಕರಣದಲ್ಲೂ ಚಿದಂಬಂರಂ ಬಂಧನ ಭೀತಿಗೆ ಒಳಗಾಗಿದ್ದಾರೆ. ಈ ಸಂಬಂಧ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು ಇಂದು ಮಧ್ಯಾಹ್ನ ದೆಹಲಿ ವಿಶೇಷ ನ್ಯಾಯಾಲಯದ ನ್ಯಾ. ಓಪಿ ಸೈನಿ ಆದೇಶ ಪ್ರಕಟಿಸಲಿದ್ದಾರೆ.

ಏನಿದು ಆರೋಪ?
ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಒಡೆತನದ ಐಎನ್‍ಎಕ್ಸ್ ಮೀಡಿಯಾಗೆ 2007ರ ಮಾರ್ಚ್ ತಿಂಗಳಿನಲ್ಲಿ ಮೂರು ಮಾರಿಷಸ್ ಕಂಪೆನಿಗಳಿಂದ ಸುಮಾರು 4.62 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹರಿದುಬರಲು ಅಂದಿನ ಸರ್ಕಾರ ಅನುಮತಿ ನೀಡಿತ್ತು. ಸರ್ಕಾರ 4.62 ಕೋಟಿ ರೂ.ಗೆ ಅನುಮತಿ ನೀಡಿದ್ದರೆ 305 ಕೋಟಿ ರೂಪಾಯಿಗಳನ್ನು ಹೂಡಿಕೆಯಾಗಿ ವಿದೇಶದಿಂದ ತರಲಾಯಿತು. ಈ ಸಂದರ್ಭದಲ್ಲಿ ಡೌನ್ ಸ್ಟ್ರೀಮ್ ಇನ್ವೆಸ್ಟ್ ಮೆಂಟ್(ಭಾರತೀಯ ಕಂಪೆನಿ ಮತ್ತೊಂದು ಕಂಪೆನಿಯ ಮೇಲೆ ವಿದೇಶಿ ಹೂಡಿಕೆಯನ್ನು ಮಾಡುವುದು) ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿತ್ತು.

ಇಂದ್ರಾಣಿ ಮುಖರ್ಜಿಯ ಕಂಪನಿಗೆ ಈ ಸಂದರ್ಭದಲ್ಲಿ ಕಾರ್ತಿ ಮಾಲೀಕತ್ವದ ಅಡ್ವಾನ್ಸ್ಡ್ ಸ್ಟ್ರಟಜಿಕ್ ಕನಸ್ಟಲಿಂಗ್ ಪ್ರೈವೆಟ್ ಲಿಮಿಟೆಡ್(ಎಎಸ್‍ಸಿಪಿಎಲ್) ಕಂಪನಿಯಿಂದ ಹೂಡಿಕೆಯಾಗಿತ್ತು. ಕಾರ್ತಿ ಮತ್ತು ಇಂದ್ರಾಣಿ ಮಾತುಕತೆಯ ಫಲವಾಗಿ ಎಎಸ್‍ಸಿಪಿಎಲ್ ಮತ್ತು ಇದರ ಸಹಭಾಗಿತ್ವದಲ್ಲಿರುವ ಕಂಪನಿಗಳು ಸುಮಾರು 7 ಲಕ್ಷ ಡಾಲರ್(ಆಗಿನ ಮೌಲ್ಯ 3.10 ಕೋಟಿ ರೂ.) ಹೂಡಿಕೆಯಾಗಿತ್ತು. ನಂತರ ಈ ಹಣ ಮರುಪಾವತಿಯಾಗಿತ್ತು. ಇದಾದ ನಂತರ ವಿದೇಶಿ ಬಂಡವಾಳ ಉತ್ತೇಜನ ಮಂಡಳಿ(ಎಫ್‍ಐಪಿಬಿ) ಕೆಲ ಬದಲಾವಣೆ ಮಾಡಿ ಇಂದ್ರಾಣಿ ಕಂಪನಿಗೆ ಅನುಮತಿ ನೀಡಿತ್ತು ಎನ್ನುವುದು ಇಡಿ ಆರೋಪ.

ಸಿಬಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, ಎಫ್‍ಐಪಿಬಿ 4.62 ಕೋಟಿ ರೂ. ವಿದೇಶಿ ಹೂಡಿಕೆಗೆ ಅನುಮತಿ ನೀಡಿತ್ತು. ಆದರೆ ಚಿದಂಬರಂ ಮೂಲಕ ಕಾರ್ತಿಗೆ ಲಂಚ ನೀಡಿದ ಪರಿಣಾಮ 305 ಕೋಟಿ ರೂ. ವಿದೇಶಿ ಹಣ ಬಂದಿತ್ತು. ಅಷ್ಟೇ ಅಲ್ಲದೇ ಐಎನ್‍ಎಕ್ಸ್ ನ್ಯೂಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಶೇ.26 ರಷ್ಟು ಡೌನ್‍ಸ್ಟ್ರೀಮ್ ಇನ್ವೆಸ್ಟ್ ಮೆಂಟ್ ಮಾಡಲಾಯಿತು ಎಂದು ತಿಳಿಸಿದ್ದರು.

chidambaram ಅ

ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಲಂಚವಾಗಿ ಪಡೆದ ಹಣದಲ್ಲಿ ಕಾರ್ತಿ ಚಿದಂಬರಂ ಸ್ಪೇನ್ ದೇಶದಲ್ಲಿ ಟೆನ್ನಿಸ್ ಕ್ಲಬ್, ಇಂಗ್ಲೆಂಡಿನಲ್ಲಿ ಕಾಟೇಜ್, ಭಾರತ ಮತ್ತು ವಿದೇಶಗಳಲ್ಲಿ ಸುಮಾರು 54 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಆಸ್ತಿಗಳನ್ನು ಖರೀದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *