ನವದೆಹಲಿ: ಐತಿಹಾಸಿಕ ಸ್ಥಳಗಳು ಮತ್ತು ನಗರಗಳಿಗೆ ಮರುನಾಮಕರಣ ಮಾಡಲು ಮರು ನಾಮಕರಣ ಆಯೋಗ ರಚನೆ ಮಾಡುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್ (Supreme Court) ಸೋಮವಾರ ತಿರಸ್ಕರಿಸಿದೆ. ಅರ್ಜಿ ಸಲ್ಲಿಸಿದ್ದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯರನ್ನು (Ashwini Kumar Upadhyay) ತರಾಟೆಗೆ ತೆಗೆದುಕೊಂಡಿದೆ.
ನ್ಯಾ. ಕೆ.ಎಂ.ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರ ಪೀಠ ಪ್ರಕರಣ ವಿಚಾರಣೆ ನಡೆಸಿ, ಸಂವಿಧಾನದಲ್ಲಿ (Constitution) ಕಲ್ಪಿಸಿರುವ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ಅರ್ಜಿ ಎಂದು ಪರಿಗಣಿಸಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು. ನಾವು ಜಾತ್ಯತೀತರು ಮತ್ತು ಸಂವಿಧಾನವನ್ನು ರಕ್ಷಿಸಬೇಕಾಗಿದೆ. ನೀವು ಗತಕಾಲದ ಬಗ್ಗೆ ಕಾಳಜಿ ಹೊಂದಿದ್ದೀರಿ ಮತ್ತು ಪ್ರಸ್ತುತ ಪೀಳಿಗೆಯ ಮೇಲೆ ಅದರ ಹೊರೆಹಾಕುವ ಪ್ರಯತ್ನ ಮಾಡಬೇಡಿ ಎಂದು ಪೀಠವು ಚಾಟಿ ಬೀಸಿತು.
ನೀವು ಭೂತಕಾಲವನ್ನು ಆಯ್ದುಕೊಂಡು ಪರಿಶೀಲಿಸುತ್ತಿದ್ದೀರಿ, ಭಾರತ ಇಂದು ಜಾತ್ಯತೀತ ದೇಶವಾಗಿದೆ. ಆದರೆ ನೀವು ನಿರ್ದಿಷ್ಟ ಸಮುದಾಯದತ್ತ ತೋರಿಸುತ್ತಿದ್ದೀರಿ, ಇದು ಅನಾಗರಿಕತೆ ಕರೆಯಲಾಗುತ್ತಿದೆ. ದೇಶ ಕೋಮು ಸಂಘರ್ಷದಲ್ಲಿ ಕುದಿಯುವುದು ನೋಡಲು ಬಯಸುತ್ತೀರಾ ಎಂದು ನ್ಯಾಯಮೂರ್ತಿ ಜೋಸೆಫ್ ಟೀಕಿಸಿದರು. ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ ಮತ್ತು ಅದು ಧಮಾರ್ಂಧತೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಆಧ್ಯಾತ್ಮದ ವಿಷಯದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ದಯವಿಟ್ಟು ಆ ಗೌರವ ಕಡಿಮೆ ಮಾಡಬೇಡಿ. ಜಗತ್ತು ಇಂದಿಗೂ ನಮ್ಮತ್ತ ನೋಡುತ್ತದೆ. ನಾನು ಕ್ರಿಶ್ಚಿಯನ್ ಆದರೆ ಹಿಂದೂ ಧರ್ಮವನ್ನು ಅಷ್ಟೇ ಇಷ್ಟಪಡುತ್ತೇನೆ ಮತ್ತು ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸಿದೆ. ಅದರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಿ. ನಿರ್ದಿಷ್ಟ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ ಎಂದು ನ್ಯಾಯಮೂರ್ತಿ ಜೋಸೆಫ್ ಗರಂ ಆದರು.
ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದನ್ನು ಮೊದಲು ಪರಿಹರಿಸಬೇಕು. ಭಾರತೀಯರು ತಮ್ಮ ನಡುವೆಯೇ ಹೋರಾಡುವುದನ್ನು ಖಚಿತಪಡಿಸಿಕೊಳ್ಳಲು ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯನ್ನು ಎತ್ತಿ ತೋರಿಸಿದ ನ್ಯಾ. ಬಿ.ವಿ ನಾಗರತ್ನ, ನಮ್ಮ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದೆ. ಅದಕ್ಕಾಗಿಯೇ ಭಾರತವು ಎಲ್ಲರನ್ನು ಒಟ್ಟುಗೂಡಿಸಿದೆ. ಇದರಿಂದಾಗಿ ನಾವು ಒಟ್ಟಿಗೆ ಬದುಕಲು ಸಾಧ್ಯವಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯು ನಮ್ಮ ಸಮಾಜದಲ್ಲಿ ಒಡಕು ತಂದಿದೆ. ನಾವು ಅದನ್ನು ಮರಳಿ ತರಬಾರದು. ಇದರಲ್ಲಿ ಧರ್ಮವನ್ನು ಎಳೆದು ತರಬಾರದು ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಒಂದು ರಾಷ್ಟ್ರವು ತನ್ನ ಗತಕಾಲದ ಕೈದಿಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳಲ್ಲಿ ಇತ್ಯರ್ಥಪಡಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಚುನಾವಣೆ ಬಂದಾಗ ಮಾತ್ರ ನಾಯಕರು ಕಾಣಿಸುತ್ತಾರೆ- ಅಣ್ಣಾಮಲೈ ವಾಗ್ದಾಳಿ
‘ಅನಾಗರಿಕ ವಿದೇಶಿ ಆಕ್ರಮಣಕಾರರು’ ಮರುನಾಮಕರಣ ಮಾಡಿದ ಸ್ಥಳಗಳ ಐತಿಹಾಸಿಕ ಹೆಸರುಗಳನ್ನು ಕಂಡುಹಿಡಿಯಲು ಮತ್ತು ಮರುನಾಮಕರಣ ಆಯೋಗವನ್ನು ರಚಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ಕೋರಿ ವಕೀಲ ಅಶ್ವಿನಿ ಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಯಡಿಯೂರಪ್ಪರ ಭಾಷಣ, ಜೀವನ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ