ನವದೆಹಲಿ: ಆರಾಧನಾ ಸ್ಥಳಗಳ ಕಾಯ್ದೆ-1991ರ ಸಿಂಧುತ್ವವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಬದಲಿಗೆ, ಈಗಾಗಲೇ ವಿಚಾರಣೆಯಲ್ಲಿರುವ ಸಂಬಂಧಿತ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ.
ಮುಖ್ಯ ನ್ಯಾ.ಸಂಜೀವ್ ಖನ್ನಾ, ನ್ಯಾ. ಪಿ.ವಿ.ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು, ಈಗಾಗಲೇ ಆರಾಧನಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದಂತೆ ಹಲವು ಅರ್ಜಿಗಳನ್ನು ಒಟ್ಟಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಸಂಬಂಧ 2024ರ ಡಿ.12ರಂದು ದೇಶದ ಎಲ್ಲಾ ನ್ಯಾಯಾಲಯಗಳಿಗೆ, ಈ ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳನ್ನು ಸ್ವೀಕರಿಸದಂತೆ ಮತ್ತು ಯಾವುದೇ ಸಮೀಕ್ಷೆಗಳಿಗೆ ಆದೇಶ ನೀಡದಂತೆ ಸೂಚನೆ ನೀಡಿದೆ.ಇದನ್ನೂ ಓದಿ:ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?
ಹೊಸದಾಗಿ ಸಲ್ಲಿಸಲಾದ ಅರ್ಜಿಯು ಈಗಾಗಲೇ ವಿಚಾರಣೆಯಲ್ಲಿರುವ ಅರ್ಜಿಗಳಿಗಿಂತ ಭಿನ್ನವಾಗಿಲ್ಲ ಎಂದು ಮುಖ್ಯ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರ ಪೀಠವು ಅಭಿಪ್ರಾಯಪಟ್ಟಿದೆ. ಈ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲರು, ಪ್ರಸ್ತುತ ವಿಚಾರಣೆಯಲ್ಲಿರುವ ಅರ್ಜಿಗಳೊಂದಿಗೆ ಈ ಅರ್ಜಿಯನ್ನೂ ಸೇರಿಸಬೇಕೆಂದು ಕೋರುತ್ತೇವೆ. ಈ ಅರ್ಜಿಯಲ್ಲಿ ಕೆಲವು ಸೂಕ್ಷ್ಮ ವಿಷಯಗಳಿವೆ. ಅವುಗಳನ್ನು ನ್ಯಾಯಾಲಯಕ್ಕೆ ಮಂಡಿಸುತ್ತೇವೆ ಎಂದು ವಾದಿಸಿದ್ದಾರೆ.
ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಹೊಸ ಅರ್ಜಿಯನ್ನು ಪರಿಗಣಿಸಲು ನ್ಯಾಯಾಲಯವು ನಿರಾಕರಿಸಿದೆ. ಆದರೆ, ಈಗಾಗಲೇ ವಿಚಾರಣೆಯಲ್ಲಿರುವ ಅರ್ಜಿಯಲ್ಲಿ ಮಧ್ಯಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆರಾಧನಾ ಸ್ಥಳಗಳ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಕೃಷ್ಣ ಕುಮಾರ್ ಉಪಾಧ್ಯಾಯ ಎಂಬುವವರು ಮೂಲ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಹಲವು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವೆಲ್ಲವನ್ನೂ ಸುಪ್ರೀಂ ಕೋರ್ಟ್ ಒಟ್ಟಿಗೆ ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಅಂತಿಮ ಆದೇಶದವರೆಗೆ, ಜ್ಞಾನವ್ಯಾಪಿ, ಶಾಹಿ ಈದ್ಗಾ, ಸಂಭಾಲ್ ಜಾಮಾ ಮಸ್ಜಿದ್, ಅಜ್ಮೀರ್ ದರ್ಗಾ ಸೇರಿದಂತೆ ಮಸೀದಿ-ಮಂದಿರ ವಿವಾದಕ್ಕೆ ಸಂಬಂಧಿಸಿದ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸದಿರಲು ಮತ್ತು ಈ ಬಗ್ಗೆ ಯಾವುದೇ ಆದೇಶಗಳನ್ನು ಹೊರಡಿಸದಿರಲು ಸುಪ್ರೀಂ ಕೋರ್ಟ್ ಎಲ್ಲಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.ಇದನ್ನೂ ಓದಿ:ದೆಹಲಿಯ ಝಂಡೇವಾಲನ್‌ನ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಭಾರೀ ಬೆಂಕಿ – ಹಲವು ಕಾರುಗಳು ಸುಟ್ಟು ಭಸ್ಮ
ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?
‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ ಅಂದರೆ 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ರೀತಿ ನಿಯಮ ರೂಪಿಸಿ ಕೇಂದ್ರ ಸರ್ಕಾರವು ಜುಲೈ 11, 1991ರಂದು ಕಾಯ್ದೆ ರೂಪಿಸಿ ಜಾರಿಗೆ ತಂದಿತ್ತು.
ಈ ಕಾಯ್ದೆಯ 4ನೇ ವಿಧಿಯ ಅನ್ವಯ, ಆಗಸ್ಟ್ 15, 1947ಕ್ಕೆ ಮುನ್ನ ಯಾವುದೇ ಧಾರ್ಮಿಕ ಸ್ಥಳದ ‘ಧಾರ್ಮಿಕ ಸ್ವರೂಪ’ ಬದಲಾಯಿಸಿ ಎಂದು ದೇಶದ ಯಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ ಅದು ವಿಚಾರಣೆಯ ಯಾವ ಹಂತದಲ್ಲಿ ಇದ್ದರೂ ರದ್ದುಪಡಿಸಬೇಕು. ಹೊಸ ಅರ್ಜಿಗಳನ್ನಂತೂ ಸ್ವೀಕರಿಸುವಂತಿಲ್ಲ.
‘1991ರ ಪೂಜಾ ಸ್ಥಳಗಳ ಕಾಯ್ದೆ’ಯ 3ನೇ ವಿಧಿಯ ಪ್ರಕಾರ, ಯಾವುದೇ ಧಾರ್ಮಿಕ ಸ್ಥಳದ ಯಾವುದೇ ಧಾರ್ಮಿಕ ವಿಧಿ ವಿಧಾನವನ್ನೂ ಬದಲಿಸುವಂತಿಲ್ಲ. ಪೂಜಾ ವಿಧಿ ವಿಧಾನವನ್ನು ಮಾರ್ಪಡಿಸುವಂತಿಲ್ಲ. ಅದೇ ಧರ್ಮದ ಬೇರೆ ಪಂಗಡದ ವಿಧಿ ವಿಧಾನವನ್ನೂ ಆಚರಿಸುವಂತಿಲ್ಲ.
ಆದರೆ, ಯಾವುದೇ ಧಾರ್ಮಿಕ ಸ್ಥಳವು ಪ್ರಾಚೀನವಾಗಿದ್ದರೆ, ಐತಿಹಾಸಿಕ ಸ್ಮಾರಕವಾಗಿದ್ದರೆ, ಪ್ರಾಚ್ಯವಸ್ತು, ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರದೇಶವಾದರೆ, ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ.
ಈ ಕಾಯ್ದೆ ಜಾರಿಗೆ ತಂದಿದ್ದು ಏಕೆ?
1991ರಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಸಂಪುಟದ ಗೃಹ ಸಚಿವ ಶಂಕರ್ ರಾವ್ ಭವರ್‌ರಾವ್ ಚೌಹಾಣ್ ಅವರು ಈ ಕಾಯ್ದೆಯಲ್ಲಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆದ ಬಳಿಕ ಕಾನೂನು ಜಾರಿಯಾಗಿತ್ತು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಕೈಗೊಂಡಿದ್ದ ರಾಮಜನ್ಮಭೂಮಿ ರಥಯಾತ್ರೆಗೆ ಆ ದಿನಗಳಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಈ ವೇಳೆ, ಕೋಮು ಸೌಹಾರ್ದತೆ ಕಾಪಾಡುವ ಸಲುವಾಗಿ ಕಾಯ್ದೆ ಜಾರಿಗೆ ತಂದಿದ್ದಾಗಿ ಪಿ. ವಿ. ನರಸಿಂಹ ರಾವ್ ಸರ್ಕಾರ ಸಮರ್ಥಿಸಿಕೊಂಡಿತ್ತು. ಪೂಜಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಕಾಯ್ದೆಯ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.ಇದನ್ನೂ ಓದಿ:ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿದ ನಿವೇದಿತಾಗೆ ಕಾಲೆಳೆದ ನೆಟ್ಟಿಗರು