ನವದೆಹಲಿ: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ (BR Gavai) ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್‌ಗೆ ನೋಟಿಸ್ ನೀಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.
ವಿಚಾರಣೆ ವೇಳೆ ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡುವಂತೆ ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವನ್ನು ಒತ್ತಾಯಿಸಿದರೂ ಕೂಡ ನ್ಯಾಯಾಲಯ ನಿರಾಕರಿಸಿದೆ. ಈ ರೀತಿ ಪ್ರಕರಣಗಳನ್ನು ತಡೆಗಟ್ಟಲು ಮಾರ್ಗಸೂಚಿಗಳ ಅಗತ್ಯವಿದೆ. ಹೀಗಾಗಿ ಒಂದು ವಾರದ ನಂತರ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ – ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ
ಈ ಬಗ್ಗೆ ವಾದ ಮಂಡಿಸಿದ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್, ಘಟನೆ ನಡೆದ ಬಳಿಕ ಕೆಲ ಸಮಯ ವಕೀಲ ರಾಕೇಶ್ ಕಿಶೋರ್‌ನ್ನು ಅರೆಸ್ಟ್ ಮಾಡಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಈ ಬಗ್ಗೆ ಸ್ವತಃ ರಾಕೇಶ್ ಕಿಶೋರ್ ಹೇಳಿಕೆ ನೀಡಿದ್ದು, ದೇವರು ನನಗೆ ಹಾಗೇ ಮಾಡುವಂತೆ ತಿಳಿಸಿದ. ಆದರೆ ನಾನು ಮತ್ತೆ ಅದೇ ರೀತಿಯಾಗಿ ಮಾಡುತ್ತೇನೆ ಅಂತ ಹೇಳಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಸೂರ್ಯಕಾಂತ್, ಈ ಕೃತ್ಯವು ತೀವ್ರ ಮತ್ತು ಗಂಭೀರವಾದ ನ್ಯಾಯಾಂಗ ನಿಂದನೆಯಾಗಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ ಒಮ್ಮೆ ಸಿಜೆಐ ಸ್ವತಃ ಕ್ಷಮಿಸಿದ ನಂತರವೂ ಹೀಗೆ ಹೇಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಈ ಘಟನೆಯನ್ನು ನಾವು ಹಾಗೇ ಬಿಡುವುದಿಲ್ಲ. ಜನರು ತಮಾಷೆ ಮಾಡುತ್ತಿದ್ದಾರೆ, ಇದು ಸಂಸ್ಥೆಗೆ ಅಗೌರವವನ್ನು ತರುತ್ತದೆ, ದಯವಿಟ್ಟು ನೋಟಿಸ್ ನೀಡಿ ಅವರು ಪಶ್ಚಾತ್ತಾಪ ವ್ಯಕ್ತಪಡಿಸಲಿ. ಇಲ್ಲದಿದ್ದರೆ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ವಕೀಲ ವಿಕಾಸ್ ಸಿಂಗ್ ಹೇಳಿದರು.
ಈ ಸಂಬಂಧ ಸಿಜೆಐ ಅವರು ಈಗಾಗಲೇ ಆರೋಪಿಯನ್ನು ಕ್ಷಮಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಹೀಗಾಗಿ ವಿರೋಧ ಮಾಡುವ ಪ್ರಕ್ರಿಯೆ ಆರಂಭಿಸುವ ಬದಲು ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್ ಕಿಶೋರ್

