ನವದೆಹಲಿ: ಆಡಿಯೋ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿರುವ ಅನರ್ಹ ಶಾಸಕರು ಸುಪ್ರೀಂಕೋರ್ಟ್ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ ಸೋಮವಾರದಿಂದ ಚುನಾವಣೆ ಪ್ರಕ್ರಿಯೆಗಳು ಶುರುವಾಗುತ್ತಿದ್ದು, ಅನರ್ಹ ಶಾಸಕರಿಗೆ ಚುನಾವಣೆ ಟೆನ್ಶನ್ ಶುರುವಾಗಿದೆ. ಈ ಹಿನ್ನೆಲೆ ಇಂದು ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಲಿದ್ದಾರೆ.
ಅನರ್ಹ ಶಾಸಕರ ಪ್ರಕರಣದ ವಾದ ಪ್ರತಿವಾದ ಮುಗಿದಿದೆ. ಇನ್ನೇನು ತೀರ್ಪು ಹೊರಬರುವ ವೇಳೆ ಆಡಿಯೋ ಬಾಂಬ್ ಸಿಡಿದು ಬಂಡಾಯಗಾರರ ನೆಮ್ಮದಿ ಕಿತ್ತುಕೊಂಡಿತ್ತು. ಈ ಟೆನ್ಷನ್ ಜೊತೆಗೆ ಅನರ್ಹರಿಗೆ ತೀರ್ಪಿನ ಹೊಸ ಸಂಕಷ್ಟ ಎದುರಾಗಿದೆ.
Advertisement
Advertisement
ಕಾಂಗ್ರೆಸ್‍ನ ಆಡಿಯೋ ವಾದವನ್ನು ಕೇಳಿ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಬಹುದು ಅಂತಾ ನೀರಿಕ್ಷೆ ಮಾಡಲಾಗಿತ್ತು. ಸೋಮವಾರದಿಂದ ಚುನಾವಣೆ ಪ್ರಕ್ರಿಯೆಗಳು ಆರಂಭವಾಗುವ ಹಿನ್ನೆಲೆ ಬಹುತೇಕ ಇಂದು ತೀರ್ಪು ಪ್ರಕಟ ಆಗಲಿದ್ದು ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ ಎನ್ನಲಾಗಿತ್ತು. ಆದರೆ ಅನರ್ಹ ಶಾಸಕರ ಎಲ್ಲಾ ಪ್ಲಾನ್ ತಲೆಕೆಳಗಾಗಿದೆ. ಇಂದೂ ಕೂಡಾ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಪ್ರಕರಣ ತೀರ್ಪು ಪ್ರಕಟಿಸುತ್ತಿಲ್ಲ. ಸೋಮವಾರ ಮತ್ತು ಮಂಗಳವಾರ ಸರ್ಕಾರಿ ರಜೆ ಹಿನ್ನೆಲೆ ಬುಧವಾರ ಅಥಾವ ಗುರುವಾರ ತೀರ್ಪು ಪ್ರಕಟ ಆಗುವ ಸಾಧ್ಯತೆ ಇದೆ. ಆದರೆ ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆ ಅನರ್ಹ ಶಾಸಕರು ಮತ್ತೆ ಚುನಾವಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
Advertisement
ತೀರ್ಪು ತಡ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಅನರ್ಹ ಶಾಸಕರು ತಿರ್ಮಾನಿಸಿದ್ದಾರೆ. ಇಂದು ನ್ಯಾ.ಎನ್.ವಿ ರಮಣ ನೇತೃತ್ವದ ಪೀಠದ ಮುಂದೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ ಚುನಾವಣೆ ಮುಂದೂಡಿಕೆಗೆ ಮನವಿ ಮಾಡಲಿದ್ದಾರೆ. ಅನರ್ಹ ಶಾಸಕರ ತೀರ್ಪು ಇನ್ನೂ ಪ್ರಕಟವಾಗದ ಹಿನ್ನೆಲೆ ಚುನಾವಣೆ ಪ್ರಕಿಯೆಗಳಿಗೆ ತಡೆ ನೀಡಬೇಕು. ಇಲ್ಲದಿದ್ರೆ ಅನರ್ಹ ಶಾಸಕರಿಗೆ ತೊಂದರೆ ಆಗಲಿದೆ. ಹೀಗಾಗಿ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಸೂಚಿಸಿ ಎಂದು ಮನವಿ ಮಾಡಲಿದ್ದಾರೆ.
ಈಗಾಗಲೇ ಒಮ್ಮೆ ಚುನಾವಣೆ ಮುಂದೂಡಿಕೆ ಮಾಡಿರುವ ಆಯೋಗ ಈಗ ಯಾವ ನಿರ್ಧಾರ ತೆಗೆದುಕೊಳ್ಳಲಿದೆ. ಅನರ್ಹ ಶಾಸಕರ ಮನವಿಗೆ ಸುಪ್ರೀಂಕೋರ್ಟ್ ಹೇಗೆ ಪ್ರತಿಕ್ರಿಯಿಸಲಿದೆ ಅನ್ನೋದು ಕುತೂಹಲ ಆಗಿದ್ದು ಇಂದು ಸುಪ್ರೀಂಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕಾದು ನೋಡಬೇಕಿದೆ.