ನವದೆಹಲಿ: ವಿಕೃತ ಕಾಮಿ ಉಮೇಶ್ ರೆಡ್ಡಿ(Umesh Reddy) ಮರಣ ದಂಡನೆ(Death Sentence) ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ಉಮೇಶ್ ರೆಡ್ಡಿಗೆ ಮರಣದಂಡನೆ ಖಾಯಂಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಉಮೇಶ್ ರೆಡ್ಡಿ ಸುಪ್ರೀಂ(Supreme Court) ಮೆಟ್ಟಿಲೇರಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸಿಜೆಐ ಉದಯ್ ಲಲಿತ್ ಅವರಿದ್ದ ತ್ರಿಸದಸ್ಯ ಪೀಠ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದೆ.
ಕಾನೂನನ್ನು ಉಲ್ಲಂಘಿಸಿ 10 ವರ್ಷಗಳ ಕಾಲ ಏಕಾಂಗಿಯಾಗಿ ಬೆಳಗಾವಿ ಜೈಲಿನಲ್ಲಿ ಇರಿಸಲಾಗಿದೆ. ಅಪರಾಧಿ ಯೋಗಕ್ಷೇಮದ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ ಈತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಡಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಯಾರು ಉಮೇಶ್ ರೆಡ್ಡಿ?
ಸೈನಿಕನಾಗಿ ವೃತ್ತಿ ಜೀವನ ಆರಂಭಿಸಿದ್ದ ಈತ ಪೊಲೀಸ್ ಇಲಾಖೆಯಲ್ಲೂ ಕೆಲಸ ಮಾಡಿದ್ದಾನೆ. ಈತ ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ ಮಾಡಿದ್ದು, 9 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನ ಕೃತ್ಯಗಳು ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗುಜರಾತ್‌ನಲ್ಲೂ ಬೆಳಕಿಗೆ ಬಂದಿವೆ. ಇನ್ನೂ ಕೆಲವು ಪ್ರಕರಣಗಳು ಹೊರ ಜಗತ್ತಿಗೆ ಪರಿಚಯವೇ ಆಗಿಲ್ಲ ಎನ್ನುವುದು ಪೊಲೀಸರ ಅಭಿಪ್ರಾಯ.
1969ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ್ದ ಉಮೇಶ್ ರೆಡ್ಡಿ, ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆಗೆ ನಿಯೋಜನೆಗೊಂಡಿದ್ದ. ಕಮಾಂಡರ್ ಮನೆಯಲ್ಲಿ ಡ್ಯೂಟಿಯಲ್ಲಿದ್ದಾಗ ಅವರ ಮಗಳ ಮೇಲೆಯೆ ಅತ್ಯಾಚಾರಕ್ಕೆ ಯತ್ನಿಸಿ, ಸೇನೆಯಿಂದ ಹೊರಬಿದ್ದಿದ್ದ. ಬಳಿಕ ಚಿತ್ರದುರ್ಗ ಜಿಲ್ಲಾ ಸಶಸ್ತ್ರಮೀಸಲು ಪಡೆ ಸೇರಿ ಅಪಘಾತ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಇದು ಸಣ್ಣ ಅಪರಾಧ ಎಂದು ಆತನನ್ನು ಬಿಟ್ಟು ಕಳಿಸಲಾಗಿತ್ತು.
ಇದಾದ ಬಳಿಕ ಈತ ತನ್ನ ಕೃತ್ಯ ಆರಂಭಿಸಿದ್ದ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪುರುಷರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಕೃತ್ಯ ನಡೆಸುತ್ತಿದ್ದ. ನೀರು ಕೇಳುವ ನೇಪದಲ್ಲಿ ಮನೆ ಪ್ರವೇಶಿಸಿ ಮಹಿಳೆಯರಿಗೆ ಚಾಕು ತೋರಿಸಿ ಬಟ್ಟೆ ಬಿಚ್ಚುವಂತೆ ಹೇಳಿ ಅತ್ಯಾಚಾರ ನಡೆಸಿ ಹತ್ಯೆಗೈದು ಚಿನ್ನಗಳೊಂದಿಗೆ ಪರಾರಿಯಾಗುತ್ತಿದ್ದ. ಸಂತ್ರಸ್ತೆಯ ಒಳ ಉಡುಪಿನೊಂದಿಗೆ ತೆರಳುತ್ತಿದ್ದ. ಪೊಲೀಸರು ಬಂಧಿಸುವ ಸಮಯದಲ್ಲಿ ಆತ ತನ್ನ ಉಡುಪಿನ ಒಳಗಡೆ ಮಹಿಳೆಯರ ಒಳ ಉಡುಪು ಧರಿಸಿ ಸಿಕ್ಕಿ ಬೀಳುತ್ತಿದ್ದ.