LatestLeading NewsMain PostNational

ನೂಪುರ್ ಶರ್ಮಾ ವಿರುದ್ಧದ ಎಲ್ಲಾ ಪ್ರಕರಣಗಳು ದೆಹಲಿಗೆ ವರ್ಗಾವಣೆ: ಸುಪ್ರೀಂ ಕೋರ್ಟ್

ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ 10 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ. ಇದರಿಂದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ದೊಡ್ಡ ಹೊರೆ ಇಳಿದಂತಾಗಿದೆ.

ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿದ್ದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ನೂಪುರ್ ವಿರುದ್ಧ ದೇಶಾದ್ಯಂತ ಪ್ರಕರಣಗಳು ದಾಖಲಾಗಿತ್ತು. ಇದೀಗ ದಾಖಲಾಗಿರುವ ಎಲ್ಲಾ 10 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲಾಗುವುದು, ನೂಪುರ್ ವಿರುದ್ಧದ ಪ್ರಕರಣಗಳ ತನಿಖೆಯನ್ನು ದೆಹಲಿ ಪೊಲೀಸರು ನಡೆಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಪ್ರವಾದಿ ಬಗ್ಗೆ ಶರ್ಮಾ ಅವರ ಹೇಳಿಕೆಗಳ ಮೇಲೆ ಇನ್ನೂ ಹೆಚ್ಚಿನ ಎಫ್‌ಐಆರ್‌ಗಳು ದಾಖಲಾದಲ್ಲಿ, ಅವುಗಳನ್ನು ಸ್ವಯಂಚಾಲಿತವಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: 8ನೇ ಬಾರಿ ಬಿಹಾರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

ನೂಪುರ್ ವಿರುದ್ಧ ದೇಶದ ಹಲವಾರು ರಾಜ್ಯಗಳಲ್ಲಿ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಅವೆಲ್ಲವನ್ನೂ ಒಂದೇ ಕಡೆಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಆದರೆ ಪಶ್ಚಿಮ ಬಂಗಾಳ ಸರ್ಕಾರ ಇದನ್ನು ವಿರೋಧಿಸಿತ್ತು.

ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ನೂಪುರ್, ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಇದು ಜಾಗತಿಕ ವಿವಾದಕ್ಕೆ ಕರಣವಾಗಿತ್ತು. ದೇಶ ವಿದೇಶಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದು, ಹಲವೆಡೆ ಹಿಂಸಾಚಾರಗಳೂ ವರದಿಯಾಗಿವೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಕೂಡಾ ನೂಪುರ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಜೆಪಿ ಈ ವಿವಾದದಿಂದ ದೂರ ಸರಿದು, ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಹಾಗೂ ವಕ್ತಾರೆ ಹುದ್ದೆಯಿಂದ ಅಮಾನತುಗೊಳಿಸಿತ್ತು. ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿಲ್ಲ ಮಹಿಳೆಯರಿಗೆ ರಕ್ಷಣೆ – ನಿತ್ಯ 6 ರೇಪ್, 7 ಕಿರುಕುಳ ಪ್ರಕರಣಗಳು ವರದಿ

Live Tv

Leave a Reply

Your email address will not be published.

Back to top button