– ಚುನಾವಣಾ ಸುಳ್ಳು ಅಫಿಡವಿಟ್ ಕೇಸ್
– ಫಡ್ನವೀಸ್ ವಿರುದ್ಧ ತನಿಖೆಗೆ ಸುಪ್ರೀಂ ಸಮ್ಮತಿ
ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿದ್ದ ಆರೋಪ ಎದುರಿಸುತ್ತಿರುವ ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.
ದೇವೇಂದ್ರ ಫಡ್ನವೀಸ್ ಅವರು 2014ರ ವಿಧಾನಸಭಾ ಚುನಾವಣೆಯ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದ ಪ್ರಕರಣಕ್ಕೆ ವಿಚಾರಣಾ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ಕ್ಲೀನ್‍ಚಿಟ್ ನೀಡಿತ್ತು. ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ತನಿಖೆಗೆ ಅವಕಾಶ ಕಲ್ಪಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ, ನ್ಯಾ. ದೀಪಕ್ ಗುಪ್ತಾ ಮತ್ತು ನ್ಯಾ. ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಪ್ರಕಣರದ ಕುರಿತು ತನಿಖೆಗೆ ಸಮ್ಮತಿ ಸೂಚಿಸಿದೆ.
‘ದೇವೇಂದ್ರ ಫಡ್ನವೀಸ್ ಅವರಿಗೆ ಅಫಿಡವಿಟ್ ಬಗ್ಗೆ ಜ್ಞಾನ ಇದ್ದರೂ ತಮ್ಮ ಮೇಲಿನ ಪ್ರಕರಣಗಳನ್ನು ಉಲ್ಲೇಖಿಸಿಲ್ಲ. ಹೀಗಾಗಿ ತನಿಖೆ ನಡೆಯಬೇಕು’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?
ದೇವೇಂದ್ರ ಫಡ್ನವೀಸ್ ವಿರುದ್ಧ 1996 ಮತ್ತು 1998ರಲ್ಲಿ ವಂಚನೆ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿವೆ. ಆದರೆ ಈ ಪ್ರಕರಣದಲ್ಲಿ ಅವರ ವಿರುದ್ಧ ಇನ್ನೂ ಆರೋಪ ಪಟ್ಟಿ ದಾಖಲಾಗಿಲ್ಲ. 2014ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ ದೇವೇಂದ್ರ ಫಡ್ನವೀಸ್ ತಮ್ಮ ಮೇಲಿದ್ದ ಎರಡು ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿಲ್ಲ ಎಂದು ಸತೀಶ್ ಉಕೆ ಆರೋಪಿಸಿದ್ದರು. ಈ ಸಂಬಂಧ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇದನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು.
ಬಾಂಬೆ ಹೈಕೋರ್ಟ್ ಕೂಡ ಸತೀಶ್ ಉಕೆ ಅರ್ಜಿಯನ್ನು ವಜಾಗೊಳಿಸಿ, ದೇವೇಂದ್ರ ಫಡ್ನವೀಸ್ ಅವರಿಗೆ ಕ್ಲೀನ್‍ಚಿಟ್ ನೀಡಿತ್ತು. ಆದರೆ ಸುಪ್ರೀಂಕೋರ್ಟ್ ತನಿಖೆಗೆ ಸಮ್ಮತಿ ನೀಡಿರುವುದು ದೇವೇಂದ್ರ ಫಡ್ನವೀಸ್ ಅವರಿಗೆ ಹಿನ್ನಡೆ ತಂದಿದೆ. ಚುನಾವಣಾ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದರೆ ಅಭ್ಯರ್ಥಿಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ಗುರಿಯಾಗುತ್ತಾರೆ. ಕೆಲವೊಮ್ಮೆ ಎರಡೂ ಶಿಕ್ಷೆಗಳನ್ನು ವಿಧಿಸಲು ಅವಕಾಶವಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. 288 ಕ್ಷೇತ್ರಗಳಲ್ಲಿ ಮತದಾನವು ಏಕಕಾಲದಲ್ಲಿಯೇ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ. ನಾಗಪುರ ನೈಋತ್ಯ ಕ್ಷೇತ್ರದಿಂದ ಫಡ್ನಾವಿಸ್ ಕಣಕ್ಕೆ ಇಳಿಯಲಿದ್ದಾರೆ.