ಸುಪ್ರೀಂ ‘ಮಹಾ’ ಆದೇಶ- ನವೆಂಬರ್ 27ಕ್ಕೆ ವಿಶ್ವಾಸಮತ ಸಾಬೀತು ಮಾಡಿ

Public TV
1 Min Read
Supreme Maharashtra

ನವದೆಹಲಿ: ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ನ್ಯಾಯಾಧೀಶರು ಬಿಹಾರ ಮತ್ತು ಉತ್ತರಾಖಂಡ ತೀರ್ಪುಗಳನ್ನು ಉಲ್ಲೇಖಿಸಿದರು. ತಕ್ಷಣವೇ ಹಂಗಾಮಿ ಸ್ಪೀಕರ್ ನೇಮಕವಾಗಬೇಕು. ವಿಶ್ವಾಸಮತ ಸಾಬೀತು ಮಾಡುವ ದೃಶ್ಯಗಳನ್ನು ಚಿತ್ರೀಕರಿಸಬೇಕು. ಬಹುಮತದ ಸಂಪೂರ್ಣ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ನೋಡಿಕೊಳ್ಳಬೇಕು. ಬಹುಮತ ಸಾಬೀತು ಪ್ರಕ್ರಿಯೆ ನೇರಪ್ರಸಾರ ಆಗಬೇಕು ಮತ್ತು ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಸೋಮವಾರ ವಿಚಾರಣೆ ಮುಕ್ತಾಯಗೊಳಿಸಿರುವ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪನ್ನ ಕಾಯ್ದಿರಿಸಿತ್ತು. ಡಿಸಿಎಂ ಎನ್‍ಸಿಪಿಯ ಅಜಿತ್ ಪವಾರ್ ಏಕಾಂಗಿಯಾಗಿ ಹೋಗಿದ್ದಾರೆ. ಇದಕ್ಕೆ ನಿನ್ನೆ ಮಿತ್ರ ಪಕ್ಷಗಳು ತೋರಿಸಿದ ಶಕ್ತಿಪ್ರದರ್ಶನವೇ ಸಾಕ್ಷಿ. ನಾವು 162 ಮಂದಿ ಇದ್ದೇವೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಮಾಡಿದೆ. ಎಲ್ಲರೂ ಶಪಥ ಬೇರೆ ಮಾಡಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೂ ಇದನ್ನು ಪ್ರಜಾಪ್ರಭುತ್ವದ ಅಣಕ ಎಂದು ಬಿಜೆಪಿ ಟೀಕಿಸಿದೆ. ಗೆಲ್ಲೋದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಈ ನಡುವೆ ಆಪರೇಷನ್ ಕಮಲ ಯತ್ನಗಳು ಒಳಗೊಳಗೆ ತೀವ್ರಗೊಂಡಿವೆ ಎನ್ನಲಾಗಿದೆ.

ಯಾರು ಯಾವುದೇ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಇಂದು ನಡೆಯುವ ಸಂಸತ್ ಜಂಟಿ ಅಧಿವೇಶನ ಬಹಿಷ್ಕರಿಸಲು ತೀರ್ಮಾನಿಸಿವೆ.

Share This Article