ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ನ್ಯಾಯಾಧೀಶೆ ಆರ್.ಭಾನುಮತಿ ಅವರು ಪ್ರಜ್ಞೆ ತಪ್ಪಿದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರಪತಿಗಳ ಕ್ಷಮಾದಾನ ತೀರ್ಪನ್ನು ಪ್ರಶ್ನಿಸಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಬಳಿಕ ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್.ಭಾನುಮತಿ ಅವರು ಪ್ರಜೆ ತಪ್ಪಿದರು. ಡಯಾಸ್ ಮೇಲೆ ಕುಳಿತಿದ್ದ ಇತರ ನ್ಯಾಯಾಧೀಶರು ಮತ್ತು ಸಿಬ್ಬಂದಿ ತಕ್ಷಣವೇ ಭಾನುಮತಿ ಅವರನ್ನು ಅವರ ಕೋಣೆಗೆ ಕರೆದೊಯ್ದರು. ಇದರಿಂದಾಗಿ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿದ್ದು, ನಂತರ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದೆ.
Advertisement
Advertisement
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ನ್ಯಾಯಾಧೀಶೆ ಆರ್.ಭಾನುಮತಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ದಿನಗಳಿಂದ ಅವರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಿದರು. ಚಿಕಿತ್ಸೆಯ ಬಳಿಕ ನ್ಯಾ. ಭಾನುಮತಿ ಅವರು ಸುಧಾರಿಸಿಕೊಂಡರು ಎಂದು ವರದಿಯಾಗಿದೆ.
Advertisement
ಈ ಹಿಂದೆ ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೆ ಏರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ರಾಷ್ಟ್ರಪತಿಗಳ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.
Advertisement
ಇನ್ನೊಂದೆಡೆ ಮತ್ತೋರ್ವ ದೋಷಿ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹೀಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂ ಕೋರ್ಟಿಗೆ ಮತ್ತೊಮ್ಮೆ ಮನವಿ ಮಾಡಿದ್ದ. ಈ ಹಿಂದೆಯೇ ನ್ಯಾಯಾಧೀಶರಾದ ಆರ್.ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್.ಬೋಪಣ್ಣ ಅವರ ನೇತೃತ್ವದ ತ್ರಿಸದಸ್ಯ ಪೀಠವು ಪವನ್ ಅರ್ಜಿಯನ್ನು ತಿರಸ್ಕೃತ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದನು.
ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಜನವರಿಯಲ್ಲಿ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ. ಆದರೆ ಅಪರಾಧಿಗಳು ಏನೇ ಮಾಡಿದರೂ ಗಲ್ಲು ಶಿಕ್ಷೆಯನ್ನು ಮಾತ್ರ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.