ನವದೆಹಲಿ: ಚುನಾವಣೆ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ನೀಡುವ ಭರಪೂರ ಆಶ್ವಾಸನೆಗಳು, ಉಚಿತ ಯೋಜನೆಗಳ ವಿರುದ್ಧ ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಅವರು, ತರ್ಕಬದ್ಧವಲ್ಲದ ಉಚಿತ ಯೋಜನೆಗಳನ್ನು ಘೋಷಿಸಿರುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾ.ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಚು.ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ
ವಿಚಾರಣೆ ವೇಳೆ ‘ಇದೊಂದು ಗಂಭೀರ ಸಮಸ್ಯೆಯಾಗಿದೆ, ಉಚಿತ ಬಜೆಟ್ ಸಾಮಾನ್ಯ ಬಜೆಟ್ ಅನ್ನು ಮೀರಿಸಿದೆ. ಇದು ಭ್ರಷ್ಟಾಚಾರವಲ್ಲದಿದ್ದರೂ, ಸರಿಯಾದ ಅಭ್ಯಾಸವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ ಅರ್ಜಿದಾರರು ಕೇವಲ ಎರಡು ಪಕ್ಷವನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವುದನ್ನು ಪ್ರಶ್ನೆ ಮಾಡಿತು.
ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರೂ. ನೀಡುವ ಭರವಸೆ ನೀಡಿದೆ. ಶಿರೋಮಣಿ ಅಕಾಲಿ ದಳ (ಎಸ್‍ಎಡಿ) ಪ್ರತಿ ಮಹಿಳೆಗೆ ಆಮಿಷ ಒಡ್ಡಲು 2000 ರೂ. ಘೋಷಿಸಿದೆ. ಕಾಂಗ್ರೆಸ್ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2000 ರೂ., ವರ್ಷಕ್ಕೆ ಎಂಟು ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದಲ್ಲದೆ, ಕಾಲೇಜು ವಿದ್ಯಾರ್ಥಿನಿಯರಿಗೆ ಸ್ಕೂಟಿ, 12ನೇ ತರಗತಿ ಪಾಸಾದ ನಂತರ 20,000 ರೂ., 10ನೇ ತರಗತಿ ಪಾಸಾದ ನಂತರ 15,000 ರೂ., 8ನೇ ತರಗತಿ ಪಾಸಾದ ನಂತರ 10,000 ರೂ. ಮತ್ತು 5ನೇ ತೇರ್ಗಡೆಯಾದ ನಂತರ 5,000 ರೂ. ನೀಡುವುದಾಗಿ ಹೇಳಿದೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್, ಪದವಿ ಓದುತ್ತಿರುವ ಪ್ರತಿ ಹುಡುಗಿಗೆ ಸ್ಕೂಟಿ, ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆ, ಪ್ರತಿ ಗೃಹಿಣಿಯರಿಗೆ ವರ್ಷಕ್ಕೆ ಎಂಟು ಉಚಿತ ಗ್ಯಾಸ್ ಸಿಲಿಂಡರ್, ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದೆ ಎಂದು ವಕೀಲ ಅಶ್ವಿನಿ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅಶ್ವಿನಿ ಉಪಾಧ್ಯಾಯ ಈ ಹಿಂದೆ ಅಭ್ಯರ್ಥಿಗಳ ಅಪರಾಧ ಪ್ರಕಣಗಳು ಮತ್ತು ಚುನಾವಣೆಗೆ ಟಿಕೆಟ್ ನೀಡಿದ ಕಾರಣಗಳನ್ನು ರಾಜಕೀಯ ಪಕ್ಷಗಳು, ಪಕ್ಷದ ವೆಬ್‍ಸೈಟ್ ಮುಖಪುಟದಲ್ಲಿ ಪ್ರಕಟಿಸಲು ಕೋರಿ ಅರ್ಜಿ ಸಲ್ಲಿಸಿದರು. ನಿಯಮ ಪಾಲಿಸದ ಪಕ್ಷಗಳ ನೋಂದಣಿ ರದ್ದು ಮಾಡುವಂತೆ ಮನವಿ ಮಾಡಿದರು. ಈ ಅರ್ಜಿ ವಿಚಾರಣೆ ಹಂತದಲ್ಲಿದೆ.