ನವದೆಹಲಿ: ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಭವಾನಿ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾ. ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ವಿಚಾರಣೆ ನಡೆಸಿತು.
ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ವಿಚಾರಣೆ ವೇಳೆ ಭವಾನಿ ರೇವಣ್ಣ ಅವರಿಗೆ ನೀಡಲಾದ ಜಾಮೀನು ರದ್ದುಗೊಳಿಸಲು ಯಾವುದೇ ಕಾರಣವಿದೆಯೇ ಎಂದು ಪೀಠ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ಪುತ್ರ ಪ್ರಜ್ವಲ್ ರೇವಣ್ಣನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಭಾಗಿಯಾಗಿದ್ದಾರೆ. ಮಹಿಳೆ ದೂರು ನೀಡುವುದನ್ನು ತಡೆಯಲು ಈ ರೀತಿ ಮಾಡಲಾಗಿದೆ ಎನ್ನಲಾಗಿದೆ. ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಈ ಅಂಶವನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು: ಸುಪ್ರೀಂ ಮಹತ್ವದ ತೀರ್ಪು
ಹೈಕೋರ್ಟ್ ಜಾಮೀನು ನೀಡಿರುವುದು ಅತ್ಯಂತ ದುರದೃಷ್ಟಕರ ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಏಕೆ ತಿರಸ್ಕರಿಸಿದೆ ಎಂಬುದನ್ನು ಹೈಕೋರ್ಟ್ ಪರಿಗಣಿಸಲಿಲ್ಲ. ಇದು ಸ್ಪಷ್ಟ ಬೆದರಿಕೆಯ ಪ್ರಕರಣವಾಗಿದೆ. ಭವಾನಿ ರೇವಣ್ಣ ಸಾಕ್ಷಿಯನ್ನು ಸೆರೆಯಲ್ಲಿಟ್ಟಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸೂರ್ಯಕಾಂತ್, ಆರೋಪಗಳು ಗಂಭೀರವಾಗಿವೆ. ಭವಾನಿ ರೇವಣ್ಣ ಅವರು ವಿಚಾರಣೆ ಎದುರಿಸಬಹುದು. ಆದರೆ ಜಾಮೀನು ರದ್ದುಗೊಳಿಸಲು ಏನಾದರೂ ಕಾರಣವಿದೆಯೇ ಎಂದು ಪ್ರಶ್ನಿಸಿದರು.
ಸಾಕ್ಷಿಯನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ಹಣದ ಆಮಿಷ ಒಡ್ಡಲಾಗಿದೆ ಎನ್ನಲಾಗಿದೆ. ಬೆದರಿಸುವ ಪ್ರಯತ್ನವೂ ನಡೆದಿದೆ. ನ್ಯಾಯಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ ಎಂದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಹೈಕೋರ್ಟ್ ದೂರಿನಲ್ಲಿ ಭವಾನಿ ರೇವಣ್ಣ ಹೆಸರಿಲ್ಲ ಎಂದು ಹೇಳಿದೆ. ನಾವು ಮಹಿಳೆಯ ಸ್ವಾತಂತ್ರ್ಯದ ಪ್ರಶ್ನೆಯನ್ನು ಮಾತ್ರ ಪರಿಗಣಿಸುತ್ತಿದ್ದೇವೆ. ಇದನ್ನು ರಾಜಕೀಯ ಮಾಡಬೇಡಿ ಎಂದರು.
ಕಪಿಲ್ ಸಿಬಲ್ ವಾದಿಸಿ, ನಾವು ರಾಜಕೀಯವನ್ನು ಬಿಟ್ಟುಬಿಡೋಣ ನಮಗೂ ರಾಜಕೀಯ ಬೇಡ. ಆದರೆ ಹೈಕೋರ್ಟ್ ಆದೇಶವನ್ನು ನೋಡಿ. ಕುಟುಂಬದ ನಿರ್ದೇಶನದ ಮೇಲೆ ಈ ಕಿಡ್ನ್ಯಾಪ್ ನಡೆದಿದೆ ಎಂದು ಹೇಳಿದರು. ಸಿಬಲ್ ವಾದ ಆಲಿಸಿದ ಬಳಿಕ ಭವಾನಿ ರೇವಣ್ಣ ಪರ ವಾದ ಆಲಿಸುವ ಸಲುವಾಗಿ ಅವರಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಲಾಯಿತು.ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ