-ಕೇಂದ್ರದ ಜಲಸಂಪನ್ಮೂಲ ಖಾತೆ ಸಚಿವರ ಜೊತೆ ಚರ್ಚೆ
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತ ನ್ಯಾಯಾಧೀಕರಣದ ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೆಚ್ಚಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ನಾಳೆ ದೆಹಲಿಯಲ್ಲಿ ಕೇಂದ್ರದ ಜಲಸಂಪನ್ಮೂಲ ಇಲಾಖೆ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಇಂದು ಸಂಜೆ ದೆಹಲಿಗೆ ಪ್ರಯಾಣಿಸಲಿದ್ದಾರೆ.
Advertisement
ಬುಧವಾರ ಬೆಳಗ್ಗೆ ನವದೆಹಲಿಯಲ್ಲಿ ಕೇಂದ್ರದ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ವೇಳೆ, ಕೇಂದ್ರ ಸರ್ಕಾರ ಶೀಘ್ರದಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕೆಂದು ರಮೇಶ್ ಜಾರಕಿಹೊಳಿ ಒತ್ತಾಯಿಸಲಿದ್ದಾರೆ. ಕಳೆದ ವಾರ ಸುಪ್ರೀಂಕೋರ್ಟ್ ಸಹ ತನ್ನ ಮಧ್ಯಂತರ ಆದೇಶದಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಯಾವುದೇ ಸಮಸ್ಯೆ ಇಲ್ಲ. ಕೇಂದ್ರವು ನೋಟಿಫಿಕೇಷನ್ ಹೊರಡಿಸಬಹುದು ಎಂದು ಆದೇಶಿಸಿತ್ತು. ಸುಪ್ರೀಂಕೋರ್ಟ್ ನ ಆದೇಶದ ಬಗ್ಗೆಯೂ, ರಾಜ್ಯದ ಪರಿಸ್ಥಿತಿ ಬಗ್ಗೆಯೂ ರಮೇಶ್ ಜಾರಕಿಹೊಳಿ ಗಜೇಂದ್ರ ಸಿಂಗ್ ಶೇಖಾವತ್ ರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಈ ಮಾತುಕತೆ ಫಲಪ್ರದವಾಗುವ ನಿರೀಕ್ಷೆಯನ್ನು ಸರ್ಕಾರ ಇಟ್ಟಕೊಂಡಿದೆ.
Advertisement
Advertisement
ಬಳಿಕ ಸಂಜೆ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳ ಜೊತೆ ದೆಹಲಿಯ ಕರ್ನಾಟಕ ಭವನದಲ್ಲಿ ಸಭೆ ನಡೆಸಲಿದ್ದಾರೆ. ನೀರು ಹಂಚಿಕೆ ವಿವಾದಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಕಾನೂನು ತಜ್ಞರು ಮತ್ತು ನೀರಾವರಿ ಇಲಾಖೆಯ ತಾಂತ್ರಿಕ ಅಧಿಕಾರಿಗಳ ಸಭೆಯನ್ನು ರಮೇಶ್ ಜಾರಕಿಹೊಳಿ ನಡೆಸಲಿದ್ದಾರೆ.