ನಾನು ಬಳ್ಳಾರಿ ಹೋಗೋವಾಗ ಪಾದಯಾತ್ರೆ ಮಾಡಿ ಸಿಎಂ ಆದವರು ಮನ:ಶಾಂತಿ ಕಳೆದುಕೊಂಡಿದ್ದಾರೆ: ಜನಾರ್ದನ ರೆಡ್ಡಿ

Public TV
2 Min Read
Janardhana Reddy

– ಹುಟ್ಟೂರು ಬಿಟ್ಟು ಹೋಗುವ ಸ್ಥಿತಿ ಯಾವ ಶತ್ರುವಿಗೂ ಬೇಡ

ಕೊಪ್ಪಳ: 14 ವರ್ಷಗಳ ಬಳಿಕ ಮತ್ತೆ ಬಳ್ಳಾರಿಗೆ ಬರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಶಾಸಕ ಜನಾರ್ದನ ರೆಡ್ಡಿ (Janardhana Reddy ) ದಂಪತಿ ಸಮೇತ ಗಂಗಾವತಿ (Gangavati ) ನಗರದ ಚನ್ನಬಸವಸ್ವಾಮಿ ದೇವಾಲಯದ ಬೆಳ್ಳಿ ರಥ ಎಳೆಯುವ ಮೂಲಕ ಹರಕೆ ತೀರಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14 ವರ್ಷಗಳ ನಂತರ ಬಳ್ಳಾರಿಗೆ ಹೋಗುತ್ತಿದ್ದೇನೆ. ಹುಟ್ಟೂರಿಗೆ ಹೋಗುತ್ತಿರುವುದು ನನಗೆ ಸಂತಸ ತಂದಿದೆ. ಗಂಗಾವತಿ ನನಗೆ ರಾಜಕೀಯ ಪುನರ್ಜನ್ಮ ನೀಡಿದೆ. ಹನುಮಂತನ ಆಶಿರ್ವಾದದಿಂದ ಬಳ್ಳಾರಿಗೆ ಹೋಗುತ್ತಿದ್ದೇನೆ. ಹುಟ್ಟೂರು ಬಿಟ್ಟು ಬದುಕುವ ಸ್ಥಿತಿ ಯಾವ ಶತ್ರುವಿಗೂ ಬರಬಾರದು ಎಂದಿದ್ದಾರೆ. ಇದನ್ನೂ ಓದಿ: 1 ವರ್ಷ ದೇವಿಯ ಆಶೀರ್ವಾದ ಸಿಗಲಿ ಎನ್ನುತ್ತಾ ಅಧಿಕಾರ ಹಂಚಿಕೆಯ ಸುಳಿವು ನೀಡಿದ್ರಾ? – ಕುತೂಹಲ ಮೂಡಿಸಿದ ಸಿಎಂ ಮಾತು

ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸುವ ಮುನ್ನ ಗಂಗಾವತಿ ವಿಜಯವೃಂದ ಗಣಪತಿ ಮುಂದೆ ಅರ್ಜಿ ಇಟ್ಟು ಪೂಜೆ ಮಾಡಿದ್ದೆ. ಈಗ ದೇವರ ಕೃಪೆಯಿಂದ ನಾನು ಮತ್ತೆ ಹುಟ್ಟೂರಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ.

ನಾವು ಯಾವುದೇ ತಪ್ಪು ಮಾಡದೇ ಇದ್ದರೂ ನಮ್ಮ ಮೇಲೆ ಆರೋಪ ಮಾಡಿದ್ದರು. ನಮ್ಮ ವಿರುದ್ಧ ಸಿಎಂ ಆಗುವ ಸ್ವಾರ್ಥದಿಂದ ಪಾದಯಾತ್ರೆ ಮಾಡಿದ್ದರು. ಇಂದು ನಾನು ಬಳ್ಳಾರಿಗೆ ಪ್ರವೇಶ ಮಾಡುತ್ತಿದ್ದೇನೆ. ಆದರೆ ಅವರು ಹಗರಣದಲ್ಲಿ ಸಿಲುಕಿ ಮನ:ಶಾಂತಿ ಕಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕುಟುಕಿದರು.

ಈ ಹಿಂದೆ ನನ್ನ ಹಾಗೂ ಯಡಿಯೂರಪ್ಪ ವಿರುದ್ಧ ಸಿಬಿಐ ಕೇಸ್ ಹಾಕಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಆಗ ಅಡ್ವಾಣಿಯವರು ಕರೆ ಮಾಡಿದ್ದರು. ನನಗೆ ಮತ್ತು ಯಡಿಯೂರಪ್ಪಗೆ ಕರೆ ಮಾಡಿ, ಆರೋಪ ಮುಕ್ತವಾಗುವವರೆಗೂ ರಾಜೀನಾಮೆ ನೀಡಲು ಹೇಳಿದ್ದರು. ನಾವು ನಗುತ್ತಲೇ ಹೋಗಿ ರಾಜೀನಾಮೆ ನೀಡಿದ್ದೆವು. ಈಗ ಸಿದ್ದರಾಮಯ್ಯನವರು ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ. ಮುಡಾ ಸೈಟ್ ತನಿಖೆಯಾದರೆ ದೊಡ್ಡ ಹಗರಣ ಹೊರಬರುತ್ತದೆ. ನೈತಿಕತೆ ಎಂಬುದು ಸಿದ್ದರಾಮಯ್ಯನವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ ಜನ್ಮಸ್ಥಳ ಬಳ್ಳಾರಿ, ರಾಜಕೀಯ ಪುನರ್ಜನ್ಮ ನೀಡಿದ್ದು ಗಂಗಾವತಿ ಹೀಗಾಗಿ ಜೀವ ಇರೋವರೆಗೂ ಗಂಗಾವತಿ ಬಿಡೋದಿಲ್ಲ ಎಂದಿದ್ದಾರೆ.

ಬಳ್ಳಾರಿಯಲ್ಲಿ ಮತ್ತೆ ಪಕ್ಷವನ್ನು ತಳಮಟ್ಟದಿಂದ ಕಟ್ಟುತ್ತೇನೆ. ಮೊದಲಿನಂತೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ನಾಳೆಯಿಂದ ಸಂಡೂರು ಕ್ಷೇತ್ರದ ಚುನಾವಣಾ ಪ್ರಚಾರ ಆರಂಭ ಮಾಡುತ್ತೇನೆ. ಸಂಡೂರು ಕ್ಷೇತ್ರದ ಗೆಲುವಿನ ಮೂಲಕವೇ ಬಳ್ಳಾರಿ ಜಿಲ್ಲೆಯಲ್ಲಿ ಕಮಲ ಅರಳಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕೆಂದ್ರದಿಂದ ತರೋದನ್ನು ರಾಜ್ಯಕ್ಕೆ ತನ್ನಿ, ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ – ಹೆಚ್‌ಡಿಕೆ ವಿರುದ್ಧವೇ ಜಿಟಿಡಿ ಕಿಡಿ

Share This Article