ನವದೆಹಲಿ: 2021ರಲ್ಲಿ ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ್ದ ಪ್ರಕರಣಕ್ಕೆ (Lakhimpur Kheri Violence) ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ (Supreme Court) ಇಂದು (ಸೋಮವಾರ) ಜಾಮೀನು ನೀಡಿದೆ. ಅಲ್ಲದೇ ಆರೋಪಿಗೆ ದೆಹಲಿ ಮತ್ತು ಲಕ್ನೋಗೆ ತೆರಳದಂತೆ ಕೋರ್ಟ್ ನಿರ್ಬಂಧ ವಿಧಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಪೀಠ ಸೂಚಿಸಿದೆ.
ವಿಚಾರಣೆಗೆ ಹಾಜರಾಗುವ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ. 117 ಸಾಕ್ಷಿಗಳ ಪೈಕಿ ಏಳು ಮಂದಿಯನ್ನು ಮಾತ್ರ ಇದುವರೆಗೆ ವಿಚಾರಣೆಗೆ ಒಳಪಡಿಸಲಾಗಿದೆ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲಿಸುವ ಮೂಲಕ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
2023ರ ಸೆ.26ರಂದು ಮಿಶ್ರಾಗೆ ನೀಡಿದ್ದ ಮಧ್ಯಂತರ ಜಾಮೀನಿನಲ್ಲಿನ ಷರತ್ತುಗಳನ್ನು ಸಡಿಲಗೊಳಿಸಿದ್ದ ಸುಪ್ರೀಂ ಕೋರ್ಟ್, ಅನಾರೋಗ್ಯಕ್ಕೀಡಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಹಾಗೂ ಪುತ್ರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ದೆಹಲಿಗೆ ಭೇಟಿ ನೀಡಲು ಆಶಿಶ್‍ಗೆ ಅನುವು ಮಾಡಿಕೊಟ್ಟಿತ್ತು. ಜತೆಗೆ ಮಧ್ಯಂತರ ಜಾಮೀನಿನ ಅವಧಿಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿತ್ತು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಹಿಂಸಾಚಾರ ನಡೆದಿತ್ತು. ಈ ವೇಳೆ ಅಜಯ್ ಮಿಶ್ರಾ ಕಾರು ಪ್ರತಿಭಟನಾ ನಿರತ ರೈತರ ಮೇಲೆ ಹರಿದು ರೈತರ ಸಾವಿಗೆ ಕಾರಣವಾಗಿತ್ತು. ಘಟನೆಯ ಬಳಿಕ ರೈತರು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದರು. ಹಿಂಸಾಚಾರದ ವೇಳೆ ಪತ್ರಕರ್ತರೊಬ್ಬರು ಸಾವಿಗೀಡಾಗಿದ್ದರು.