ನವದೆಹಲಿ: ಕೊರೊನಾ ರಣಕೇಕೆ ನಡುವೆ ಬಾಬ್ರಿ ಮಸೀದಿ ಪ್ರಕರಣ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಆಗಸ್ಟ್ 31ರ ಡೆಡ್‍ಲೈನ್ ನೀಡಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಖನೌ ಸಿಬಿಐ ಕೋರ್ಟ್‍ಗೆ ಮಹತ್ವದ ನಿರ್ದೇಶನ ನೀಡಿದೆ.
ಕಳೆದ ವರ್ಷ ಜುಲೈ 19 ರಂದು ಪ್ರಕರಣದ ವಿಚಾರಣೆ 9 ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಏಪ್ರಿಲ್ ನಲ್ಲಿ ಕೋರ್ಟ್ ನೀಡಿದ್ದ ಅವಧಿ ಪೂರ್ಣಗೊಂಡಿತ್ತು. ಪರಿಣಾಮ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಮೂರ್ತಿ ಅವರು ಮೇ 6 ರಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆಗಸ್ಟ್ 31ಕ್ಕೆ ಡೆಡ್ ಲೈನ್ ನೀಡಿದೆ.
ಸುಪ್ರೀಂ ಕೋರ್ಟ್ ಪೀಠದ ನ್ಯಾಯಾಧೀಶರು ಪ್ರಕರಣದ ವಿಚಾರಣೆ ತಡವಾಗದಂತೆ ವಿಶೇಷ ನ್ಯಾಯಾಧೀಶ ಎಸ್‍ಕೆ ಯಾದವ್ ಅವರಿಗೆ ಬೆಳವಣಿಗೆಗಳನ್ನು ಕಾನೂನಿನ ಅನ್ವಯ ಮೇಲ್ ವಿಚಾರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಪ್ರಕರಣದ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿ ವಾದ-ಪ್ರತಿವಾದಗಳನ್ನು ರೆಕಾರ್ಡ್ ಮಾಡಲು ಜಸ್ಟೀಸ್ ಆರ್‍ಎಫ್ ನಾರಿಮನ್ ಹಾಗೂ ನ್ಯಾ.ಸೂರ್ಯಕಾಂತ್ ಅವರ ನ್ಯಾಯಪೀಠ ಆದೇಶಿಸಿದೆ.
ಸುಮಾರು 28 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಆರೋಪಿಗಳಾಗಿದ್ದಾರೆ. 1992 ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯ್ತು. ಅಯೋಧ್ಯೆ ರಾಮಮಂದಿರ ವಿವಾದ ಸಂಬಂಧ 2019 ನವೆಂಬರ್ 19ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
1992ರಲ್ಲಿ ಡಿಸೆಂಬರ್ 6ರ ಸಂಜೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದಿತ್ತು. 2003 ಸೆಪ್ಟೆಂಬರ್ 19 ರಂದು ರಾಯ್ ಬರೇಲಿ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ ಅಡ್ವಾಣಿ, ಜೋಷಿ ಅವರಿಗೆ ವಿಚಾರಣೆಯಿಂದ ಮುಕ್ತಿ ನೀಡಿತ್ತು. ಆದರೆ 2017 ರಲ್ಲಿ ಸುಪ್ರೀಂ ಕೋರ್ಟ್ ಅಡ್ವಾಣಿ, ಉಮಾ ಭಾರತಿ, ಕಳ್ಯಾಣ್ ಸಿಂಗ್ ಅವರನ್ನು ಸೇರಿ 13 ಜನರ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಪರಿಣಾಮ ವಿಚಾರಣೆಯಲ್ಲಿ ಅವರ ಹೆಸರನ್ನ ಸೇರ್ಪಡೆ ಮಾಡಲಾಗಿತ್ತು. ಲಕ್ನೋ ಸಿಬಿಐ ಕೋರ್ಟ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. ಸದ್ಯ ಕೇಸ್ ವಿಚಾರಣೆಯ ಅಂತಿಮ ಹಂತವನ್ನು ತಲುಪಿದ್ದು, ತೀವ್ರ ಕುತೂಹಲವನ್ನು ಮೂಡಿಸಿದೆ.
ಸಿಬಿಐ ವಾದವೇನು?: ಬಿಜೆಪಿ ನಾಯಕರು ಮಸೀದಿ ಕೆಡವಲು ಪೂರ್ವ ಸಿದ್ಧತೆ ಮಾಡಿದ್ದರು. ಮಸೀದಿ ಕೆಡವಿದ ದಿನ ಸ್ಟೇಜ್ ಮೇಲೆ ಭಾಷಣ ಮಾಡಿದ್ದು ಕೂಡ ಇದರ ಭಾಗವಾಗಿತ್ತು. ಅಡ್ವಾಣಿ ಹಾಗೂ ಇತರೆ ಬಿಜೆಪಿ ನಾಯಕರು ಮಸೀದಿ ಕೆಡವಿದ ಹಿಂದಿನ ದಿನ ಭೇಟಿಯಾಗಿ ಮಸೀದಿ ಧ್ವಂಸಗೊಳಿಸಬೇಕೆಂದು ನಿರ್ಧರಿಸಿದ್ದರು ಎಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಆದ್ದರಿಂದ ಇದೊಂದು ಪೂರ್ವ ಯೋಜಿತ, ಉದ್ದೇಶಪೂರ್ವಕ ಘಟನೆ ಎಂದು ಸಿಬಿಐ ಹೇಳಿತ್ತು.
ಆದ್ರೆ 2010ರಲ್ಲಿ ಅಲಹಾಬಾದ್ ಹೈ ಕೋರ್ಟ್, ಬಿಜೆಪಿ ನಾಯಕರ ವಿರುದ್ಧ ಒಳಸಂಚು ಅರೋಪ ಮಾಡಿದ ಸಿಬಿಐ ವಾದವನ್ನು ತಿರಸ್ಕರಿಸಿತ್ತು. ಹೀಗಾಗಿ ರಾಯ್‍ಬರೇಲಿಯಲ್ಲಿಯೇ ಬಿಜೆಪಿ ನಾಯಕರ ವಿಚಾರಣೆ ಮುಂದುವರೆದಿತ್ತು. ಕೋರ್ಟ್‍ನ ಈ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು.
ಮಸೀದಿ ಇದ್ದ ಜಾಗದಲ್ಲಿ ಮಂದಿರ ಕಟ್ಟಬೇಕೆಂದು ಎಲ್‍ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ಆರಂಭವಾದ ಚಳುವಳಿಯ ಬೆನ್ನಲ್ಲೇ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ ಜನ್ಮ ಭೂಮಿಯ ಸ್ಥಳದಲ್ಲಿ ಮಸೀದಿ ಕಟ್ಟಲಾಗಿದೆ ಎಂದು ಹಿಂದೂಗಳು ನಂಬಿದ್ದು, ಈ ಜಾಗದಲ್ಲಿ ರಾಮ ಮಂದಿರ ಕಟ್ಟಬೇಕೆಂದು ಒತ್ತಾಯಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಸಂದರ್ಭದಲ್ಲಿ ದೇಶದಾದ್ಯಂತ ಹಿಂದೂ ಹಾಗೂ ಮುಸ್ಲಿಮರ ನಡುವೆ ಘರ್ಷಣೆಗಳು ನಡೆದು ಸುಮಾರು 2 ಸಾವಿರ ಮಂದಿ ಸಾವನ್ನಪ್ಪಿದ್ದರು.
ಏನಿದು ಪ್ರಕರಣ?: ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ ಬಿಜೆಪಿ ಮುಖಂಡರ ಮೇಲಿದ್ದ ಆರೋಪವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 20 ರಂದು ತಾಂತ್ರಿಕ ಕಾರಣ ಹೇಳಿ ಕೈಬಿಟ್ಟಿದ್ದನ್ನು ಹಾಜಿ ಮೆಹಬೂಬ್ ಅಹಮ್ಮದ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಸಿಬಿಐ ಕೂಡ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಾದ ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಉಮಾ ಭಾರತಿ, ಮಹಂತ ಅವೈದ್ಯನಾಥ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ರಿತಂಬರಾ, ಕಲ್ಯಾಣ್ ಸಿಂಗ್ ಅವರು ಈ ಪಟ್ಟಿಯಲ್ಲಿ ಸೇರಿದ್ದಾರೆ.