ನವದೆಹಲಿ: ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆಯನ್ನು ಸುಪ್ರೀಂಕೋರ್ಟ್ (Supreme Court) ಮುಂದುವರಿಸಿ ಆದೇಶ ಹೊರಡಿಸಿದೆ.
ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದು ಕೋರಿ ಕಾಂಗ್ರೆಸ್ ನಾಯಕರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಹೃಷಿಕೇಶ್ ನೇತೃತ್ವದ ದ್ವಿ-ಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ವಕಾಲತ್ತು ಸಲ್ಲಿಸಲು ನಾಲ್ಕು ವಾರಗಳ ಕಾಲ ಸಮಯ ನೀಡಬೇಕು ಎಂದು ರಾಜ್ಯ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆ ಕೋರ್ಟ್ ವಿಚಾರಣೆಯನ್ನು ಮುಂದೂಡಿತು. ಅಲ್ಲದೇ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಆದೇಶ ನೀಡಿತು. ಇದನ್ನೂ ಓದಿ: ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ- ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ಹಂತದ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿ, ಖುದ್ದು ವಿಚಾರಣೆಗೆ ಸೂಚನೆ ನೀಡಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ (Siddaramaiah), ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಏನಿದು ಪ್ರಕರಣ?:
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯ ಡೆತ್ ನೋಟ್‍ನಲ್ಲಿ ಅಂದಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ಅವರ ಹೆಸರು ಕಂಡುಬಂದಿತ್ತು. ಈ ಹಿನ್ನೆಲೆ ಕೆಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ 2022ರ ಏ.14 ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಸೇರಿ ಕಾಂಗ್ರೆಸ್‍ನ ನಾಯಕರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ರಸ್ತೆ ತಡೆಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಪರದಾಡಿದ್ದರು. ಇದನ್ನೂ ಓದಿ: ಇದು ರಾಜಕೀಯ ಪ್ರೇರಿತ ಕೇಸ್, ಪ್ರಾದೇಶಿಕ ಪಕ್ಷದ ಮೇಲೆ ದಾಳಿ – ಕೋರ್ಟ್‌ನಲ್ಲಿ ಇಂದು ವಾದ, ಪ್ರತಿವಾದ ಹೇಗಿತ್ತು?