ನವದೆಹಲಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎಡವಟ್ಟಿನಿಂದಾಗಿ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ಇಂದು ವಿಚಾರಣೆ ಮಾಡಿದ ನ್ಯಾ. ಆರ್ ಎಫ್ ನಾರಿಮನ್ ಮತ್ತು ನ್ಯಾ. ರವೀಂದ್ರ ಭಟ್ ನೇತೃತ್ವದ ದ್ವಿ ಸದಸ್ಯ ಪೀಠ ಇಡಿ ಮೇಲ್ಮನವಿಯನ್ನು ತಿರಸ್ಕರಿಸಿತು. ಅಲ್ಲದೇ ಇಡಿ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತು.
ಇಡಿ ಸಲ್ಲಿಸಿದ ಮೇಲ್ಮನವಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಚಿದಂಬರಂ ಪ್ರಕರಣದ ಅಂಶಗಳನ್ನು ಕಾಪಿ ಪೇಸ್ಟ್ ಮಾಡಿದ್ದಿರಿ ಎಂದು ಸುಪ್ರೀಂಕೋರ್ಟ್ ಇಡಿ ಅರ್ಜಿ ವಜಾ ಮಾಡಿತು.
ಇಡಿ ಅಧಿಕಾರಿಗಳು ಸುಪ್ರೀಂಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಭಾರೀ ಪ್ರಮಾದ ಆಗಿತ್ತು. ಡಿ.ಕೆ ಶಿವಕುಮಾರ್ ಅವರನ್ನ ಮಾಜಿ ಕೇಂದ್ರ ಗೃಹ ಸಚಿವ, ಮಾಜಿ ಕೇಂದ್ರ ಹಣಕಾಸು ಸಚಿವ ಎಂದು ಉಲ್ಲಖಿಸಲಾಗಿತ್ತು. ಇದರಿಂದ ನ್ಯಾ.ಆರ್ ಎಫ್ ನಾರಿಮನ್ ಕೆಂಡಾ ಮಂಡಲವಾದರು. ಚಿದಂಬರಂ ಪ್ರಕರಣದ ಕಾಪಿ ಪೇಸ್ಟ್ ಮಾಡಿಕೊಂಡು ಬಂದಿದ್ದೀರಿ ಎಂದು ಇಡಿ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು. ಈ ಕಾರಣದಿಂದಲೇ ಇಡಿ ಅರ್ಜಿ ವಜಾಗೊಂಡಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಇಡಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣವನ್ನು ವಿಚಾರಣೆ ನಡೆಸುವಂತೆ ಕೋರ್ಟ್ ಮನವೊಲಿಸಲು ಯತ್ನಿಸಿದರು. ಈ ವೇಳೆ ತುಷಾರ್ ಮೆಹ್ತಾ ವಿರುದ್ಧ ಆಕ್ರೋಶ ವ್ಯಕಪಡಿಸಿದ ನ್ಯಾ. ನಾರಿಮನ್ ನೀವು ಕೋರ್ಟ್ ಆದೇಶವನ್ನು ಲಘುವಾಗಿ ಪರಿಗಣಿಸದೆ ನೀಡಿದ ಆದೇಶಗಳನ್ನು ಗೌರವಿಸಿ. ಸರ್ಕಾರಿ ಅಧೀನದ ಸಂಸ್ಥೆಗಳು ಜನ ಸಾಮಾನ್ಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ನೀವೂ ಮತ್ತು ನಿಮ್ಮ ಸರ್ಕಾರ ಶಬರಿಮಲೆ ಆದೇಶವನ್ನು ಓದಿಕೊಳ್ಳಿ ಎಂದು ಎಂದು ಚಾಟಿ ಬೀಸಿದರು.
ನ್ಯಾಯಮೂರ್ತಿಗಳ ಮಾತಿನಿಂದ ಆಘಾತಗೊಂಡ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್‍ನ ಎಲ್ಲ ತೀರ್ಪುಗಳನ್ನೂ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ, ಗೌರವಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯ್ದೆಯ 45ನೇ ಸೆಕ್ಷನ್ ಉಲ್ಲೇಖಿಸಿರುವುದನ್ನು ಶಿವಕುಮಾರ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ವೇಳೆ ಈಗಾಗಲೇ ಅನೂರ್ಜಿತಗೊಳಿಸಿರುವ ಸೆಕ್ಷನ್ ಪ್ರಸ್ತಾಪಿಸಿರುವುದನ್ನು ತಿಳಿದ ಪೀಠ ನಾಗರಿಕರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಎಚ್ಚರಿಕೆ ನೀಡಿತು.
2017ರಲ್ಲಿ 45ನೇ ಸೆಕ್ಷನ್ ಅನೂರ್ಜಿತಗೊಳಿಸಲಾಗಿದೆ. ಕೇವಲ ಅನುಮಾನಗಳ ಮೇಲೆಯೇ ಅಪಾದಿತರ ಹಕ್ಕುಗಳನ್ನು ಮೊಟಕುಗೊಳಿಸುತ್ತೆ ಎಂದು ಬೇಸರ ವ್ಯಕ್ತಪಡಿಸಿ ಅರ್ಜಿಯನ್ನು ವಜಾ ಮಾಡಿತು.