ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ದೇವಸ್ಥಾನದಲ್ಲಿ ದೇವಾಳದ ಸಿಬ್ಬಂದಿಯಿಂದ ಭಕ್ತರ ಮೇಲೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಮೃಣಾಲಿನಿ ಪಧಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಆದರ್ಶ ಗೋಯಲ್ ಮತ್ತು ನ್ಯಾ ಅಶೋಕ್ ಭೂಷಣ್ ಅವರಿದ್ದ ಪೀಠ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
Advertisement
ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣವ ದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.
Advertisement
Advertisement
ದೇವಸ್ಥಾನದ ಸುತ್ತಲಿನ ಪರಿಸರ ಹಾಳಾಗಿದ್ದು ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ದೇವರ ಸೇವಾ ಕಾರ್ಯಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿದೆ ಎಂದು ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿದ್ದರು.
Advertisement
ಲಕ್ಷಾಂತರ ಭಕ್ತರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ದಾನವನ್ನು ಅರ್ಪಣೆ ಮಾಡುತ್ತಾರೆ. ಹಾಗಾಗಿ ಭಕ್ತರ ಸೇವಾದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಹಾಗೂ ದೇವಸ್ಥಾನದ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಪೀಠ ತಿಳಿಸಿದೆ.
ದೇವಸ್ಥಾನದಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆಗಳು ಹಾಗೂ ಆಡಳಿತ ಮಂಡಳಿಯಲ್ಲಿರುವ ನ್ಯೂನತೆಗಳನ್ನು ಜೂನ್ 30 ರೊಳಗೆ ಮಧ್ಯಂತರ ವರದಿ ಮಾಡುವಂತೆ ಪೂರಿ ಜಿಲ್ಲಾ ನ್ಯಾಯಾಧೀಶರಿಗೆ ಪೀಠ ಆದೇಶಿಸಿದೆ.
1954 ರ ಶ್ರೀ ಜಗನ್ನಾಥ ದೇವಸ್ಥಾನದ ಕಾಯ್ದೆ ಪ್ರಕಾರ ಭಕ್ತರು ನೇರವಾಗಿ ಸಿಬ್ಬಂದಿಗೆ ಹಣವನ್ನು ನೀಡಿ ಸೇವೆ ಮಾಡುವಂತಿಲ್ಲ. ಹಣ ಹಾಕುವುದಿದ್ದರೆ ಹುಂಡಿಯಲ್ಲಿ ಹಾಕಬೇಕು ಅಥವಾ ಸೇವಾ ಕೌಂಟರ್ ನಲ್ಲಿ ಹಣವನ್ನು ಪಾವತಿಸಿ ಸೇವೆ ಮಾಡಬೇಕು.
ದೇವಸ್ಥಾನದಲ್ಲಿ ನಡೆಯುತ್ತಿರುವ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾರ್ಪಾಡು ಅವಶ್ಯಕತೆ ಇದ್ದಲ್ಲಿ ಸೂಚಿಸುವಂತೆ ಕೇಂದ್ರಕ್ಕೆ ಪೀಠ ತಿಳಿಸಿದೆ. ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಮ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಪೀಠ ನೇಮಿಸಿದೆ. ಎಲ್ಲಾ ವರದಿಗಳನ್ನು ನೋಡಿ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.