ನವದೆಹಲಿ: 10 ದಿನದ ಒಳಗಡೆ ಮುಚ್ಚಿದ ಲಕೋಟೆಯಲ್ಲಿ ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
59 ಸಾವಿರ ಕೋಟಿ ರೂ. ನೀಡಿ ಫ್ರಾನ್ಸ್ ನಿಂದ 36 ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ವಕೀಲರಾದ ಮನೋಹರ್ ಲಾಲ್ ಶರ್ಮಾ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಪಿಐಎಲ್ ಜೊತೆಗೆ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಪಿಐಎಲ್ ಸಲ್ಲಿಸಿದ್ದಾರೆ.
Advertisement
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ. ಎಸ್.ಕೆ. ಕೌಲ್ ಮತ್ತು ನ್ಯಾ.ಕೆ.ಎಂ ಜೋಸೆಫ್ ಅವರನ್ನೊಳಗೊಂಡ ಪೀಠ, ವಿಮಾನಗಳ ಬೆಲೆ ಕುರಿತು ಸಂಪೂರ್ಣ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ 10 ದಿನದ ಒಳಗಡೆ ಸಲ್ಲಿಸುವಂತೆ ಸೂಚನೆ ನೀಡಿದೆ.
Advertisement
Advertisement
ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ವಿಮಾನ ಖರೀದಿಯ ಬೆಲೆ ಗೌಪ್ಯತೆಯನ್ನು ಕಾಪಾಡಲಾಗಿದ್ದು, ಸಾರ್ವಜನಿಕವಾಗಿ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದರು. ಈ ಸಮಯದಲ್ಲಿ ಕೋರ್ಟ್ ರಫೇಲ್ ಯುದ್ಧ ವಿಮಾನದ ತಾಂತ್ರಿಕ ಗೌಪ್ಯ ವಿಚಾರಗಳು ನಮಗೆ ಬೇಕಾಗಿಲ್ಲ ಆದರೆ ಒಪ್ಪಂದ ಮತ್ತು ಬೆಲೆಯ ಮಾಹಿತಿಯನ್ನು ಸಾರ್ವಜನಿಕರಿಂದ ಮುಚ್ಚಿಡುವಂತಿಲ್ಲ, ಹತ್ತು ದಿನಗಳ ಒಳಗೆ ಅರ್ಜಿದಾರರು ಕೇಳುವ ಮಾಹಿತಿಯನ್ನು ನೀಡಬೇಕು ಎಂದು ಆದೇಶಿಸಿದೆ.
Advertisement
ಪ್ರಶಾಂತ್ ಭೂಷಣ್ ಅವರು, ವ್ಯವಹಾರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಸಿಬಿಐ ತನಿಖೆಗೆ ಆದೇಶಿಸಿ ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ವಿಚಾರಣೆ ಮುಗಿಯುವ ತನಕ ನೀವು ಕಾಯಬೇಕು, ಈಗಲೇ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಿತು.
ಅ.10 ರಂದು ವಿಚಾರಣೆ ನಡೆಸಿದ್ದ ಪೀಠ, ಅರ್ಜಿಗಳಲ್ಲಿ ಒಪ್ಪಂದ ಕುರಿತು ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳನ್ನು ಈಗ ಪರಿಗಣಿಸುವುದಿಲ್ಲ. ಆದರೆ ಈ ಖರೀದಿ ಪ್ರಕ್ರಿಯೆ ನಡೆಸಿದ ಪ್ರಕ್ರಿಯೆ, ತಾಂತ್ರಿಕ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸೂಚಿಸಿತ್ತು. ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಅ.27ರಂದು ತಿಳಿಸಿದ ಬಳಿಕ ಸುಪ್ರೀಂ ಈಗ ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸೂಚಿಸಿದೆ.
ರಫೇಲ್ ವಿಮಾನಗಳ ಖರೀದಿಯಲ್ಲಿ ಭಾರೀ ಅಕ್ರಮಗಳು ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಒಪ್ಪಂದ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಆಗ್ರಹಿಸಿತ್ತು. ಆದರೆ ಕೇಂದ್ರ ಖರೀದಿ ಸಂಬಂಧದ ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸದಂತೆ ಎರಡು ಸರ್ಕಾರಗಳ ನಡುವೆ ಒಪ್ಪಂದ ನಡೆದಿದೆ. ಹೀಗಾಗಿ ಸಾರ್ವಜನಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಆರೋಪಗಳಿಗೆ ತಿರುಗೇಟು ನೀಡಿತ್ತು. ಈಗ ಸುಪ್ರೀಂ ಕೋರ್ಟ್ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv