– ಅಪ್ರಾಪ್ತೆಯ 30 ವಾರಗಳ ಗರ್ಭವನ್ನು ಕೊನೆಗೊಳಿಸಲು ಕೋರ್ಟ್ ಅನುಮತಿ
ನವದೆಹಲಿ: ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ಮಹಿಳೆಗೆ ನ್ಯಾಯಾಂಗ ಒತ್ತಾಯಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ (Supreme Court), ಅಪ್ರಾಪ್ತ ವಯಸ್ಸಿನ ಬಾಲಕಿಯ 30 ವಾರಗಳ ಗರ್ಭವನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ.
ಪ್ರಕರಣವೊಂದರಲ್ಲಿ ಬಾಲಕಿ ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಗರ್ಭ ಧರಿಸಿದ್ದಳು. ಪ್ರಸ್ತುತ ಅವಳು ಗರ್ಭವನ್ನು ಮುಂದುವರಿಸಲು ಬಯಸುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯವು, ಆಕೆಯ ಪುನರುತ್ಪಾದಕ ಸ್ವಾಯತ್ತತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಿ ಹೇಳಿತು. ಆಕೆಯ ಇಚ್ಛೆಯ ವಿರುದ್ಧ ಗರ್ಭವನ್ನು ಮುಂದುವರಿಸಲು ಒತ್ತಾಯಿಸಲಾಗದು ಎಂದು ಪೀಠ ತಿಳಿಸಿತು. ಇದನ್ನೂ ಓದಿ: ಚುನಾವಣೆಯಲ್ಲಿ ಉಚಿತ ಕೊಡುಗೆ – ಸುಪ್ರೀಂ ಕಳವಳ, ಮಾರ್ಚ್‌ನಲ್ಲಿ ವಿಚಾರಣೆ
ಪ್ರಕರಣದಲ್ಲಿ ಬಾಲಕಿ ಅಪ್ರಾಪ್ತೆಯಾಗಿದ್ದಾಗ ಯುವಕನೊಂದಿಗಿನ ಸಂಬಂಧದಲ್ಲಿ ಗರ್ಭ ಧರಿಸಿದ್ದಳು. ಇದು ಸಮ್ಮತಿಯಿಂದ ಆಗಿರಲಿ ಅಥವಾ ಇಲ್ಲದಿರಲಿ, ಬಾಲಕಿ ಮಗುವನ್ನು ಹೊರುವ ಇಚ್ಛೆಯನ್ನು ಹೊಂದಿಲ್ಲ ಎಂಬುದು ಮುಖ್ಯವಾಗಿದೆ ಎಂದು ಕೋರ್ಟ್ ಗಮನಿಸಿದೆ.
ಮುಂಬೈನ JJ ಆಸ್ಪತ್ರೆಯಲ್ಲಿ ಎಲ್ಲಾ ಅಗತ್ಯ ವೈದ್ಯಕೀಯ ನಿಯಮಾವಳಿಗಳನ್ನು ಪಾಲಿಸಿ ಗರ್ಭಪಾತದ ಕಾರ್ಯವಿಧಾನವನ್ನು ನಡೆಸಲು ಕೋರ್ಟ್ ನಿರ್ದೇಶಿಸಿದೆ. ಬಾಲಕಿಯು ಗರ್ಭಪಾತಕ್ಕೆ ಒಪ್ಪಿಗೆ ನೀಡುವ ಲಿಖಿತ ಘೋಷಣೆಯನ್ನು ಸಲ್ಲಿಸಬೇಕು ಎಂದೂ ಆದೇಶಿಸಲಾಗಿದೆ. ಇದನ್ನೂ ಓದಿ: Pariksha Pe Charcha | ಚೀಪ್ ಆಗಿ ಸಿಗುತ್ತೆ ಅಂತ ಟೈಂ ವೇಸ್ಟ್ ಮಾಡಬೇಡಿ – ಎಕ್ಸಾಂ ಟೆನ್ಷನ್‌ಗೆ ಮೋದಿ ಮಾರ್ಗದರ್ಶಿ

