ಅನರ್ಹಗೊಳಿಸಿದ್ದೇ ಕಾನೂನು ಬಾಹಿರ, ಆತುರದ ನಿರ್ಧಾರ – ಬುಧವಾರಕ್ಕೆ ಮುಂದೂಡಿಕೆ

Public TV
5 Min Read
supreme court

– 7 ದಿನ ಅವಕಾಶ ನೀಡಲಿಲ್ಲ
– ಸ್ಪೀಕರ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ
– ಉಪ ಚುನಾವಣೆಗೆ ಸುಪ್ರೀಂ ತಡೆ ನೀಡಬೇಕು

ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ಇಂದು ನ್ಯಾ. ಎನ್‍ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಹಾಗೂ ಕಾಂಗ್ರೆಸ್ ಪರ ಕಪಿಲ್ ಸಿಬಲ್ ವಾದ ಮಂಡಿಸಿದರು.

Rebel MLA 7

ಆರಂಭದಲ್ಲಿ ವಾದ ಆಲಿಸಿದ ಸುಪ್ರೀಂಕೋರ್ಟ್ ಕೆಲ ಹೊತ್ತು ವಿಚಾರಣೆ ಮುಂದೂಡಿತು. ಬಳಿಕ ಮಧ್ಯಾಹ್ನ 12:30 ಬಳಿಕ ಒಂದೂವರೆ ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಯಿತು. ಮೊದಲು ವಾದ ಆರಂಭಿಸಿದ ಅನರ್ಹ ಶಾಸಕರ ವಕೀಲ ಮುಕುಲ್ ರೋಹ್ಟಗಿ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹಾಗಾಗಿ ಮಧ್ಯಂತರ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಎಲ್ಲ ಅನರ್ಹ ಶಾಸಕರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಸುದೀರ್ಘ ವಿಚಾರಣೆ ಅವಕಾಶ ಕೊಡಬೇಕು ಮತ್ತು ಚುನಾವಣೆಗೆ ತಡೆ ನೀಡಬಾರದು. ಅನರ್ಹ ಶಾಸಕರು ಚುನಾವಣೆ ಸ್ಪರ್ಧೆಗೆ ಅವಕಾಶ ಕೊಡಬಾರದು ಎಂದರು. ಈ ಬಗ್ಗೆ ಸುಧೀರ್ಘ ವಿಚಾರಣೆ ನಡೆಸುವುದಾಗಿ ಹೇಳಿದ ಪೀಠ ಬುಧವಾರ ಮುಕುಲ್ ರೋಹ್ಟಗಿ ಹಾಗೂ ಗುರುವಾರ ಕಪಿಲ್ ಸಿಬಲ್ ವಾದ ಮಂಡನೆಗೆ ಅವಕಾಶ ನೀಡುವುದಾಗಿ ಹೇಳಿತು. ಮಧ್ಯಂತರ ಆದೇಶಕ್ಕೆ ಸೀಮಿತವಾಗಿರುವಂತೆ ವಾದ ಮಂಡಿಸಲು ಸೂಚನೆ ನೀಡಿತು.

mukul rohatgi

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ಕಚೇರಿಗೆ, ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ರೋಹ್ಟಗಿ ವಾದ ಹೀಗಿತ್ತು:
ಶಾಸಕರ ರಾಜೀನಾಮೆ ವಿಚಾರದಲ್ಲಿ ಅಂದಿನ ಸ್ಪೀಕರ್ ಅವರು ನ್ಯಾಯಬದ್ಧವಾಗಿ ನಡೆದುಕೊಂಡಿಲ್ಲ. ರಾಜೀನಾಮೆ ಅಂಗೀಕಾರ ಮಾಡದೇ ಅನರ್ಹ ಮಾಡಿದ್ದಾರೆ. ಸುಪ್ರೀಂಕೋರ್ಟಿಗೆ ಮೊದಲು ರಾಜೀನಾಮೆ ಅಂಗಿಕರಿಸಲು ಹೇಳಿತ್ತು. ಅದಾಗ್ಯೂ ಅನರ್ಹ ಮಾಡಿದ್ದಕ್ಕೆ ಶಾಸಕರೆಲ್ಲ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಈ ಮೂಲಕ ಅನರ್ಹ ಶಾಸಕರ ಹಕ್ಕನ್ನೇ ಕಸಿಯಲಾಗಿದೆ. ಹೀಗಾಗೀ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಲೇಬೇಕು.

rebel congress jds resigns e 1000x582 2

ಶಾಸಕರ ರಾಜೀನಾಮೆ ಸ್ವಯಂಪ್ರೇರಿತ ಹಾಗೂ ವೈಯಕ್ತಿಕ. ಆದರೆ ಅಂದಿನ ಸ್ಪೀಕರ್ ಅದನ್ನು ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲಿಲ್ಲ. ಶಾಸಕರನ್ನು ಅನರ್ಹಗೊಳಿಸಿದ್ದೇ ಕಾನೂನು ಬಾಹಿರ ಮತ್ತು ಆತುರದ ನಿರ್ಧಾರ. ಸ್ಪೀಕರ್ ನೋಟಿಸ್ ನೀಡಿದ ಬಳಿಕ ಅದಕ್ಕೆ ಉತ್ತರಿಸಲು ಏಳು ದಿನ ಕಾಲಾವಕಾಶ ನೀಡಬೇಕು. ಆದರೆ ಮೂರು ದಿನ ಮಾತ್ರ ನೀಡಲಾಗಿತ್ತು. ಸ್ಪೀಕರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಂಡಾಯ ಎದ್ದಿದ್ದ ಈ ಶಾಸಕರ ಮನವಿಯನ್ನು ಪುರಸ್ಕಾರ ಮಾಡಲಿಲ್ಲ. ಇದು ವಿಪ್ ಉಲ್ಲಂಘನೆಯ ಪ್ರಕರಣ ಅಲ್ಲವೇ ಅಲ್ಲ.

ಅರ್ಜಿ ಸಲ್ಲಿಸಿ ಎಂಟು ವಾರಗಳಾಗಿದ್ದು ಈಗ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆ ಗೆ ಸೆಪ್ಟೆಂಬರ್ 30 ಕೊನೆಯ ದಿನ ಹಾಗಾಗಿ ಪ್ರಕರಣದ ತುರ್ತು ವಿಚಾರಣೆ ನಡೆಯಬೇಕು. ಉಪಚುನಾವಣೆ ಅಧಿಸೂಚನೆ ತಡೆ ನೀಡಬೇಕು, ಇಲ್ಲ ಉಪ ಚುನಾವಣೆ ನಿಲ್ಲಲು ಅವಕಾಶ ನೀಡಬೇಕು ಅಥವಾ ಸ್ಪೀಕರ್ ಆದೇಶ ರದ್ದು ಮಾಡಬೇಕು. ಸಂವಿಧಾನದ ಪ್ರಕಾರ ಅನರ್ಹ ಶಾಸಕರಿಗೆ ಸ್ಪರ್ಧಿಸುವ ಅವಕಾಶ ಇದೆ. ಸ್ಪೀಕರ್ 2023ರವರೆಗೆ ಸ್ಪರ್ಧೆಗೆ ನಿಷೇಧ ಹೇರಿದ್ದು ಅಪ್ರಸ್ತುತ. ಈಗ ಪ್ರಕರಣ ಇತ್ಯರ್ಥ ಆಗದಿದ್ದರೆ 2023 ರವರೆಗೂ ಸ್ಪರ್ಧೆ ಸಾಧ್ಯವಿಲ್ಲ. ಅನರ್ಹ ಶಾಸಕರು ತಮ್ಮ ಅವಕಾಶ ಕಳೆದುಕೊಳ್ಳುತ್ತಾರೆ.

Rebel MLAs C 1

ಚುನಾವಣಾ ಆಯೋಗ ಕೂಡಾ ಸ್ಪರ್ಧೆ ಮಾಡುವಂತಿಲ್ಲ ಎಂದಿದೆ. ಹೀಗಾಗಿ ಕೋರ್ಟ್ ಮಧ್ಯಪ್ರವೇಶ ಮಾಡಲೇಬೇಕು. ಅನರ್ಹ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಉದಾಹರಣೆ ಇಲ್ಲ, ಯಾವುದೇ ಆಧಾರ ಇಲ್ಲದೇ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿ ಅನರ್ಹ ಮಾಡಿರುವ ಸ್ಪೀಕರ್ ನಿರ್ಧಾರ ಕಾನೂನುಬಾಹಿರ. ಈ ಹಿಂದೆ ಅಪರೂಪದ ಪ್ರಕರಣದಲ್ಲಿ ಚುನಾವಣೆಗೆ ತಡೆ ನೀಡಿದ ಉದಾಹರಣೆಗಳಿವೆ. 2015 ರಲ್ಲಿ ಅಲಹಾಬಾದ್ ಹೈಕೋರ್ಟ್ ಅನರ್ಹತೆ ಪ್ರಕರಣದಲ್ಲಿ ಇಂತದೊಂದು ಆದೇಶ ನೀಡಿತ್ತು. ಈ ಆಧಾರದ ಮೇಲೆ ಚುನಾವಣೆಗೆ ತಡೆ ನೀಡಬಹದು.

ಸಂವಿಧಾನದಲ್ಲಿ ಎರಡು ರೀತಿಯಲ್ಲಿ ಶಾಸಕರನ್ನು ಅನರ್ಹತೆ ಮಾಡಲು ಅವಕಾಶವಿದೆ. ವಿಧಿ 191/1 ಪ್ರಕಾರ ಎರಡು ಸದ್ಯ ಇರುವ ಶಾಸಕತ್ವದಿಂದ ಅನರ್ಹತೆ ಮಾಡಬಹುದು. ಮುಂದೆ ಅವಧಿ ಮುಗಿಯುವವರೆಗೂ ಶಾಸಕರಾಗುವಂತಿಲ್ಲ ಎಂದು ಅನರ್ಹ ಮಾಡಬಹುದು. ಶಾಸಕ ಕ್ರಿಮಿನಲ್ ಪ್ರಕರಣದ ಅಡಿ ಜೈಲು ಸೇರಿರಬೇಕು ಅಥವಾ ಆರೋಗ್ಯದ ಸಮಸ್ಯೆ, ಬುದ್ಧಿ ಭ್ರಮಣೆ ಮುಂತಾದ ಸಂದರ್ಭದಲ್ಲಿ ಇದು ಅನ್ವಯವಾಗುತ್ತದೆ.

REBEL MLA 1

191/2 ವಿಧಿ ಪ್ರಕಾರ ಶಾಸಕ ಸ್ಥಾನದಿಂದ ಮಾತ್ರ ಅನರ್ಹಗೊಳಿಸಲು ಸಾಧ್ಯ, ಅನರ್ಹರ ಮರು ಆಯ್ಕೆ ಬಗ್ಗೆ ಯಾವುದೇ ಆದೇಶ ಮಾಡುವಂತಿಲ್ಲ. ವಿಧಿ 361/ಬಿ ಪ್ರಕಾರ ಅನರ್ಹರಾದವರು ಅವಧಿ ಮುಗಿಯುವರೆಗೂ ಲಾಭದಾಯಕ ಹುದ್ದೆ ಹೊಂದುವಂತಿಲ್ಲ, ಮರು ಆಯ್ಕೆ ಆಗುವ ವಿಷಯದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಸಿಬಲ್ ಆಕ್ಷೇಪ
ರಮೇಶ್ ಜಾರಕಿಹೋಳಿಗೆ ಕಾಲಾವಕಾಶ ನೀಡಲಾಗಿತ್ತು. ಫೆಬ್ರವರಿಯಲ್ಲಿ ನೋಟಿಸ್ ನೀಡಲಾಗಿತ್ತು, ಸಂವಿಧಾನಿಕ ಕ್ರಮಗಳನ್ನು ಅನುಸರಿಸಿ ಅನರ್ಹ ಮಾಡಲಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆ ಅವಶ್ಯಕತೆ ಇದೆ. ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಬೇಕು ಎಂದು ಕೆಪಿಸಿಸಿ ಪರ ಕಪಿಲ್ ಸಿಬಲ್ ವಾದಿಸಿದರು. ಈ ವಾದಕ್ಕೆ ರೋಹ್ಟಗಿ ಆಕ್ಷೇಪಿಸಿ ಪ್ರತಿಕ್ರಿಯೆ ಇಬ್ಬರಿಗೆ ಮಾತ್ರ ಮೊದಲು ನೋಟಿಸ್ ನೀಡಲಾಗಿದೆ. ಮಿಕ್ಕವರು ರಾಜೀನಾಮೆ ಸಲ್ಲಿಸಿದ ನಂತರವೇ ನೋಟಿಸ್ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

MND JDS CONGRESS

ಈ ವೇಳೆ ಮಧ್ಯ ಪ್ರವೇಶ ಮಾಡಿದ ನ್ಯಾಯಪೀಠ ಬುಧವಾರ ರೊಹ್ಟಗಿ ವಾದ ಮಂಡಿಸಲಿ, ನೀವೂ ಗುರುವಾರ ವಾದ ಮಾಡಿ ಎಂದು ಕಪಿಲ್ ಸಿಬಲ್ ಅವರಿಗೆ ಸೂಚನೆ ನೀಡಿತು. ಬಳಿಕ ಬುಧುವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಕೋರ್ಟ್ ಹಾಲ್ ನಲ್ಲಿ ಉಪಸ್ಥಿತಿ ಇದ್ದ ಚುನಾವಣೆ ಆಯೋಗ ಪರ ವಕೀಲ ರಾಕೇಶ್ ದ್ವಿವೇದಿ ಅನರ್ಹ ಶಾಸಕರು ಸ್ಪರ್ಧೆ ಮಾಡುವ ಬಗ್ಗೆ ಆಕ್ಷೇಪಣೆ ಇಲ್ಲ ಅವರು ಸ್ಪರ್ಧೆ ಮಾಡಲಿ, ಚುನಾವಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ವಿರೋಧ ವ್ಯಕ್ತಪಡಿಸಿದರು, ನೀವು ಇನ್ನೂ ಪ್ರಕರಣದಲ್ಲಿ ಪಾರ್ಟಿ ಆಗಿಲ್ಲ. ಹೀಗಾಗಿ ನೀವೂ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ವಿರೋಧಿಸಿದ್ರು. ಈ ವೇಳೆ ಕೋರ್ಟ್ ಪ್ರಕರಣದಲ್ಲಿ ಪಾರ್ಟಿ ಮಾಡುವಂತೆ ಮುಕುಲ್ ರೊಹ್ಟಗಿಗೆ ಸೂಚನೆ ನೀಡಿತು. ಪಾರ್ಟಿ ಆಗಿರದ ಕಾರಣ ಕೋರ್ಟ್ ಕೂಡಾ ಚುನಾವಣೆ ಆಯೋಗದ ಅಭಿಪ್ರಾಯ ಪರಿಗಣಿಸಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *