ಯಾದಗಿರಿ: 2 ತಿಂಗಳಿಂದ ತೊಗರಿಬೇಳೆ ಪೂರೈಕೆ ಸ್ಥಗಿತ- ಸಾಂಬಾರಿಲ್ಲದೆ ಬಿಸಿಯೂಟ ಮಾಡ್ತಿರೋ ಶಾಲಾ ಮಕ್ಕಳು

Public TV
2 Min Read
ydg school F

ಯಾದಗಿರಿ: ಸರ್ಕಾರ ವಿದ್ಯಾರ್ಥಿಗಳ ಹಸಿವನ್ನು ತಣಿಸಲು ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದರೆ ಯಾದಗಿರಿ ಜಿಲ್ಲೆಯ ಮಕ್ಕಳು ಬಿಸಿಯೂಟಕ್ಕೆ ಬೇಕಾದ ಸಾಂಬಾರ್‍ನಿಂದ ವಂಚಿತರಾಗಿದ್ದಾರೆ. ಸಾಂಬಾರ್ ಇಲ್ಲದೇ ಅನ್ನ ತಿನ್ನುವ ದುಸ್ಥಿತಿ ಜಿಲ್ಲೆಯಲ್ಲಿ ತಲೆದೋರಿದೆ. ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಎರಡು ತಿಂಗಳಿನಿಂದ ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ.

ydg school 8

ಯಾದಗಿರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗೋದಾಮಿನಲ್ಲಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವಷ್ಟು ತೊಗರಿ ಬೇಳೆ ಸಂಗ್ರಹ ಮಾಡಿದ್ರು. ಆದ್ರೆ ತೊಗರಿ ಬೇಳೆ ವಿದ್ಯಾರ್ಥಿಗಳ ಹಸಿವನ್ನು ತಣಿಸದೇ ಗೋದಾಮಿನಲ್ಲಿಯೇ ಕೊಳೆಯುವಂತಾಗಿದೆ. ಸರ್ಕಾರ ಶಾಲಾ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸಲು ಹಾಗೂ ಪೌಷ್ಠಿಕಾಂಶ ಹೆಚ್ಚಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಬಿಸಿಯೂಟ ಯೋಜನೆಗೆಂದೇ ಸರ್ಕಾರ ಕೋಟ್ಯಾನುಟ್ಟಗಲೇ ಹಣ ಖರ್ಚು ಮಾಡುತ್ತಿದ್ದೆ. ಆದ್ರೆ ಸರ್ಕಾರದ ಯೋಜನೆ ಬಡ ಮಕ್ಕಳಿಗೆ ಮುಟ್ಟದೆ ಗೋದಾಮಿನಲ್ಲಿಯೇ ಕೊಳೆಯುತ್ತಿದೆ.

ydg school 3

ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ ತಾಲೂಕಿನಲ್ಲಿ 1,404 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ತೊಗರಿ ಬೇಳೆ ಪೂರೈಸಲು ಟೆಂಡರ್ ಕರೆದು ಸಂಬಂಧಿಸಿದ ಟೆಂಡರ್ ಗುತ್ತಿಗೆದಾರರು ಶಾಲೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ತೊಗರಿ ಬೇಳೆಯನ್ನು ಶಾಲೆಗೆ ಪೂರೈಸಬೇಕಿತ್ತು. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ತೊಗರಿ ಬೇಳೆ ಪೂರೈಕೆ ಮಾಡಿಲ್ಲ.

ಜನವರಿ ತಿಂಗಳಲ್ಲಿ ತೊಗರಿ ಬೇಳೆ ಪೂರೈಸಲು ಬೀದರ್‍ನ ಖಾಸಗಿ ಸಂಸ್ಥೆಯವರು ಟೆಂಡರ್ ಪಡೆದಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತೊಗರಿ ಬೇಳೆಯ ದರ ಅನುಮೋದನೆಯಾದ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡದ ಹಿನ್ನಲೆ ಗುತ್ತಿಗೆದಾರರು ತೊಗರಿ ಬೇಳೆಯನ್ನು ಶಾಲೆಗಳಿಗೆ ಪೂರೈಕೆ ಮಾಡದೆ ಸ್ಥಗಿತಗೊಳಿಸಿದ್ದಾರೆ. ಜನವರಿ ತಿಂಗಳು ಬಿಟ್ಟು ಅಧಿಕಾರಿಗಳು ಫೆಬ್ರವರಿ ತಿಂಗಳಲ್ಲಿ ಶಾಲೆಗಳಿಗೆ ತೊಗರಿ ಬೇಳೆ ಪೂರೈಸಲು ಟೆಂಡರ್ ಕರೆದಿದ್ದಾರೆ. ಕಲಬುರಗಿ ಮೂಲದ ಹನುಮಾನ್ ಟ್ರೇಡರ್ಸ್ ಗುತ್ತಿಗೆ ಪಡೆದಿದ್ದು ದರ ಅನುಮೋದನೆಯಾಗಿದೆ. 1132 ಕ್ವಿಂಟಾಲ್ ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್ಗೆ 5307 ರೂ. ನಂತೆ ಪೂರೈಸಬೇಕೆಂದು ಗುತ್ತಿಗೆ ನೀಡಲಾಗಿದೆ.

ydg school 1

ಇಷ್ಟಾದ್ರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಇಬ್ಬರ ನಡುವೆ ಕೂಸು ಬಡವಾಯಿತೆಂಬಂತೆ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ. ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಮಾಡಿಲ್ಲ. ಅಕ್ಷರ ದಾಸೋಹ ಅಧಿಕಾರಿಗಳು ತೊಗರಿ ಬೇಳೆ ಪೂರೈಸದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಹಾರ ಇಲಾಖೆ ಅಧಿಕಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಬರಿ ಅನ್ನ ತಿನ್ನುವಂತಾಗಿದೆ. ಸ್ವಲ್ಪ ಮಟ್ಟಿಗೆ ತರಕಾರಿ ಹಾಕಿ ಚಿತ್ರಾನ್ನ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಆದ್ರೆ ತರಕಾರಿ ಮಾತ್ರ ಯಾವುದಕ್ಕೂ ಸರಿ ಹೋಗುತ್ತಿಲ್ಲ. ಮಕ್ಕಳಿಗೆ ತೊಗರಿ ಸಾಂಬಾರ್ ಇದ್ರೆ ಊಟ ಮಾಡಲು ಅನುಕೂಲ ಜೊತೆ ಪೌಷ್ಠಿಕತೆ ಸಿಗಲಿದೆ.

ydg school 5

ಕೆಲ ಶಾಲೆ ವಿದ್ಯಾರ್ಥಿಗಳು ಶಾಲೆಯಲ್ಲಿ ನೀಡಿದ ಅನ್ನದ ಜೊತೆ ಮಧ್ಯಾಹ್ನ ದೂರದ ಮನೆಗೆ ಹೋಗಿ ಸಾಂಬಾರ್ ತೆಗೆದುಕೊಂಡು ಬಂದು ಪರಸ್ಪರ ಹಂಚಿಕೊಂಡು ಊಟ ಮಾಡುವಂತಹ ದುಸ್ಥಿತಿ ತಲೆದೊರಿದೆ. ಕಳೆದ ಎರಡು ತಿಂಗಳಿನಿಂದ ತೊಗರಿ ಬೇಳೆ ಪೂರೈಕೆ ನಿಂತಿದ್ರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಮುಂದಿನ ತಿಂಗಳು ಶೈಕ್ಷಣಿಕ ವರ್ಷ ಮುಕ್ತಾಯ ಆಗಲಿದೆ. ಆದ ಕಾರಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತೊಗರಿ ಬೇಳೆ ಪೂರೈಸುವ ಕೆಲಸ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *