ಕೊಲಂಬೊ: ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಬೌಂಡರಿಯೊಂದಿಗೆ ಲಂಕಾ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿತು. ಅಲ್ಲದೇ ಲಂಕಾ ತವರಿನಲ್ಲೇ ಕ್ಲೀನ್ ಸ್ವೀಪ್‌ನೊಂದಿಗೆ ಸರಣಿ ಗೆದ್ದುಕೊಂಡಿತು.
ಗೆಲುವಿಗೆ 138 ರನ್ ಗುರಿ ಪಡೆದಿದ್ದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಕೆ 137 ರನ್ ಗಳಿಸಿ ಮ್ಯಾಚ್ ಟೈನಲ್ಲಿ ನಿಂತಿತು. ಇದರಿಂದ ಮ್ಯಾಚ್ ಸೂಪರ್ ಓವರ್‌ನತ್ತ ತಿರುಗಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ 2 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿತು. ಆದ್ರೆ ಟೀಂ ಇಂಡಿಯಾ ಪರ ಕಣಕ್ಕಿಳಿದ ನಾಯಕ ಸೂರ್ಯಕುಮಾರ್, ಮಹೀಶ್ ತೀಕ್ಷಣ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಚಚ್ಚಿ ನೀರು ಕುಡಿದಂತೆ ಮ್ಯಾಚ್ ಗೆಲ್ಲಿಸಿದರು.
ಕೊನೇ 2 ಓವರ್ ಥ್ರಿಲ್ಲಿಂಗ್:
138 ರನ್ ಗುರಿ ಬೆನ್ನಟ್ಟಿದ್ದ ಲಂಕಾ ತಂಡಕ್ಕೆ ಕೊನೇ 2 ಓವರ್‌ಗಳಲ್ಲಿ ಗೆಲುವಿಗೆ 9 ರನ್ ಬೇಕಿತ್ತು. ಆದ್ರೆ 19ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ರಿಂಕು ಸಿಂಗ್ 2 ಪ್ರಮುಖ ವಿಕೆಟ್ ಕಿತ್ತು, ಕೇವಲ 3 ರನ್ ಬಿಟ್ಟುಕೊಟ್ಟರು. ಕೊನೇ ಓವರ್‌ನಲ್ಲಿ 6 ರನ್ ಬೇಕಿದ್ದಾಗ ನಾಯಕ ಸೂರ್ಯಕುಮಾರ್ ಯಾದವ್ ಅವರೇ ಖುದ್ದು ಬೌಲಿಂಗ್‌ಗೆ ಇಳಿದರು. ಮೊದಲ ಎಸೆತದಲ್ಲಿ ರನ್ ಬಿಟ್ಟುಕೊಡದ ಸೂರ್ಯ 2-3ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತರು. 4ನೇ ಎಸೆತದಲ್ಲಿ 1 ರನ್ ಬಿಟ್ಟುಕೊಟ್ಟರು. 5ನೇ ಎಸೆತದಲ್ಲಿ ರನೌಟ್‌ಗೆ ಸುಲಭ ಸಾಧ್ಯತೆ ಇದ್ದರೂ ಕೊಂಚ ಗಲಿಬಿಲಿಯಿಂದ ಸೂರ್ಯ 2 ರನ್ ಕೈಚೆಲ್ಲಿದರು. ಕೊನೇ ಎಸೆತದಲ್ಲಿ ಲಂಕಾ ಬ್ಯಾಟರ್‌ಗಳು 2 ರನ್ ಕದಿಯುವಲ್ಲಿ ಯಶಸ್ವಿಯಾದ ಪರಿಣಾಮ ಮ್ಯಾಚ್ ಸೂಪರ್ ಓವರ್‌ನತ್ತ ತಿರುಗಿತು.
ಸೂಪರ್ ಓವರ್ ನಿಯಮವೇನು?:
* ಪ್ರತಿ ತಂಡವು 3 ಬ್ಯಾಟ್ಸ್ ಮೆನ್ ಹಾಗೂ ಓರ್ವ ಬೌಲರನ್ನು ಆಯ್ಕೆ ಮಾಡಬೇಕು.
* ಇಬ್ಬರು ಆಟಗಾರರು ಔಟ್ ಆದರೆ ತಂಡ ಆಲೌಟ್ ಆದಂತೆ ಲೆಕ್ಕ.
* ಸೂಪರ್ ಓವರ್ ನಲ್ಲಿ ಅತ್ಯಧಿಕ ರನ್ ಗಳಿಸಿದ ತಂಡ ವಿಜೇತ ಎಂದು ಘೋಷಣೆ
* ಪ್ರತಿ ತಂಡಕ್ಕೆ 1 ಓವರ್ ಆಡುವ ಅವಕಾಶ
ಚೇಸಿಂಗ್ ಮಾಡಿದ ಲಂಕಾ ಪರ ಆರಂಭಿಕರಾದ ಪಥುಮ್ ನಿಸ್ಸಾಂಕ 26ರನ್, ಕುಸಲ್ ಮೆಂಡಿಸ್ 43 ರನ್, ಕುಸಲ್ ಪೆರೆರಾ 46 ರನ್ ಬಾರಿಸಿದರು. ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ಜೈಸ್ವಾಲ್ 10 ರನ್, ಶುಭಮನ್ ಗಿಲ್ 39 ರನ್, ಶಿವಂ ದುಬೆ 13 ರನ್, ಸೂರ್ಯ 8 ರನ್, ರಿಂಕು ಸಿಂಗ್ 1 ರನ್, ರಿಯಾನ್ ಪರಾಗ್ 26 ರನ್, ವಾಷಿಂಗ್ಟನ್ ಸುಂದರ್ 25 ರನ್ ಹಾಗೂ ರವಿ ಬಿಷ್ಣೋಯಿ 8 ರನ್ ಗಳಿಸಿದ್ರೆ ಸಿರಾಜ್, ಸಂಜು ಸ್ಯಾಮ್ಸನ್ ಶೂನ್ಯ ಸುತ್ತಿದರು.