LatestNational

ಸೂಪರ್ 30 ಆನಂದ್‍ಗೆ 50 ಸಾವಿರ ರೂ. ದಂಡ

– ಗುವಾಹಟಿ ಹೈಕೋರ್ಟ್ ಆದೇಶ
– ವಿಚಾರಣೆಗೆ ಹಾಜರಾಗದ್ದಕ್ಕೆ ದಂಡ

ಗುವಾಹಟಿ: ಸೂಪರ್ 30 ಸ್ಥಾಪಕ ಆನಂದ್ ಕುಮಾರ್ ಅವರಿಗೆ ಅಸ್ಸಾಂನ ಗುವಾಹಟಿ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.

ಐಐಟಿ-ಗುವಾಹಟಿಯ ನಾಲ್ಕು ವಿದ್ಯಾರ್ಥಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ಇಂದು ಗುವಾಹಟಿ ಹೈಕೋರ್ಟಿನಲ್ಲಿ ವಿಚಾರಣೆ ಇತ್ತು. ಆದರೆ ಆನಂದ್ ಕುಮಾರ್ ಅವರು ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು ನ್ಯಾಯಮೂರ್ತಿ ಅಚಿಂತ್ಯ ಮಲ್ಲಾ ಬುಜೋರ್ ಬರುವ ಅವರನ್ನೊಳಗೊಂಡ ನ್ಯಾಯಪೀಠವು ಈ ದಂಡ ವಿಧಿಸಿದೆ. ಹಾಗೆಯೇ ನವೆಂಬರ್ 28ರಂದು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಗೊಳಿಸಲಾಗಿದೆ.

ನವೆಂಬರ್ 19 ರಂದು ಗುವಾಹಟಿ ಹೈಕೋರ್ಟ್ ಆನಂದ್ ಕುಮಾರ್ ಅವರನ್ನು ವೈಯಕ್ತಿಕವಾಗಿ ನವೆಂಬರ್ 26 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಹಿಂದಿನ ಆದೇಶದ ಹೊರತಾಗಿಯೂ ಕುಮಾರ್ ವಿಚಾರಣೆಗೆ ಹಾಜರಾಗಲಿಲ್ಲ. ಇದು ನ್ಯಾಯಾಧೀಶರ ಅಸಮಾಧಾನಕ್ಕೆ ಕಾರಣವಾಗಿದ್ದು, ಕೋರ್ಟಿಗೆ ಹಾಜರಾಗಿದ್ದ ಐದು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಆನಂದ್ ಅವರು ತಲಾ 10 ಸಾವಿರ ರೂ.ಗಳನ್ನು ಪಾವತಿಸುವಂತೆ ನಿರ್ದೇಶಿಸಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ಸೂಪರ್ 30 ಪಾಟ್ನಾ ಮೂಲದ ಸಂಸ್ಥೆಯಾಗಿದ್ದು, ಇಲ್ಲಿ ಆನಂದ್ ಕುಮಾರ್ ಅವರು ಬಡ ವಿದ್ಯಾರ್ಥಿಗಳನ್ನು ಐಐಟಿ ಪ್ರವೇಶ ಪರೀಕ್ಷೆಗೆ ಸಿದ್ಧಪಡಿಸುತ್ತಾರೆ. ಆದರೆ ಆನಂದ್ ಕುಮಾರ್ ಅವರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ತಪ್ಪು ಕಲ್ಪನೆ. ಅವರು 2008 ಬಳಿಕ ಸೂಪರ್ 30 ನಡೆಸುತ್ತಿಲ್ಲ ಎಂದು ಆರೋಪಿಸಿ ಐಐಟಿ ಗುವಾಹಟಿಯ ನಾಲ್ಕು ವಿದ್ಯಾರ್ಥಿಗಳು 2018ರ ಸೆಪ್ಟೆಂಬರ್ ನಲ್ಲಿ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದರು.

ವಿದ್ಯಾರ್ಥಿಗಳ ಅರ್ಜಿ ಆಧಾರದ ಮೇರೆಗೆ ಕೋರ್ಟ್ ಆನಂದ್ ಕುಮಾರ್ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅಭಯಾನಂದ್ ಅವರಿಗೆ 2018ರ ಸೆಪ್ಟೆಂಬರ್ ನಲ್ಲಿ ನೋಟಿಸ್ ನೀಡಿತ್ತು. ಯಾಕೆಂದರೆ 2002ರಲ್ಲಿ ಸೂಪರ್ 30 ಸಂಸ್ಥೆಯನ್ನು ಪ್ರಾರಂಭಿಸಿದಾಗ ಅಭಯಾನಂದ್ ಅವರು ಆನಂದ್ ಅವರಿಗೆ ಸಾಥ್ ಕೊಟ್ಟಿದ್ದರು.

ಈ ನೋಟಿಸ್‍ಗೆ ಆನಂದ್ ಅವರು ಉತ್ತರಿಸಿ, ಕೋರ್ಟಿಗೆ ಹಾಜರಾಗದಿದ್ದರೂ ಅಭಯಾನಂದ್ ಅವರು ಈ ವರ್ಷದ ಜನವರಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಅದರಲ್ಲಿ ಮೊದಲು ಸೂಪರ್ 30 ನಡೆಯುತ್ತಿತ್ತು ಎನ್ನುವ ಬಗ್ಗೆ ಮಾಹಿತಿ ಇದೆ. ಆದರೆ 2008ರ ನಂತರ ಸೂಪರ್ 30 ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕೋರ್ಟಿಗೆ ತಿಳಿಸಿದ್ದರು.

2008ರ ನಂತರ ಆನಂದ್ ಕುಮಾರ್ ಯಾವುದೇ ಸೂಪರ್ 30 ತರಗತಿಗಳನ್ನು ನಡೆಸುತ್ತಿಲ್ಲ ಎಂಬುದು ಅರ್ಜಿದಾರ ವಿದ್ಯಾರ್ಥಿಗಳ ಆರೋಪವಾಗಿದೆ. ಅಲ್ಲದೆ ಸೂಪರ್ 30ಗೆ ಸೇರ್ಪಡೆಗೊಳ್ಳಲು ಬಡ ವಿದ್ಯಾರ್ಥಿಗಳು ಪಾಟ್ನಾಗೆ ಬರುತ್ತಾರೆ. ಆದರೆ ಅವರನ್ನು ಪಾಟ್ನಾದಲ್ಲಿರುವ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಕೋಚಿಂಗ್ ಇನ್‍ಸ್ಟಿಟ್ಯೂಟ್‍ಗೆ 33 ಸಾವಿರ ಶುಲ್ಕ ಪಡೆದು ಸೇರಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಅಷ್ಟೇ ಅಲ್ಲದೆ ಈ ಇನ್‍ಸ್ಟಿಟ್ಯೂಟ್‍ನ ಕೆಲವು ವಿದ್ಯಾರ್ಥಿಗಳೊಂದಿಗೆ ಪ್ರತಿ ವರ್ಷ ಐಐಟಿ-ಜೆಇಇ ಫಲಿತಾಂಶಗಳು ಪ್ರಕಟವಾದ ನಂತರ ಆನಂದ್ ಕುಮಾರ್ ಮಾಧ್ಯಮಗಳ ಮುಂದೆ ಬರುತ್ತಾರೆ. ಪರೀಕ್ಷೆಯನ್ನು ಪಾಸ್ ಆದ ಸೂಪರ್ 30 ವಿದ್ಯಾರ್ಥಿಗಳು ಅವರೇ ಎಂದು ಹೇಳಿಕೊಳ್ಳುತ್ತಾರೆ. ಕಳೆದ ವರ್ಷ ಕೂಡ ಸೂಪರ್ 30ರ 26 ವಿದ್ಯಾರ್ಥಿಗಳು ಐಐಟಿ-ಜೆಇಇ ಪರೀಕ್ಷೆ ಪಾಸಾಗಿದ್ದಾರೆ ಎಂದು ಆನಂದ್ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳ ಹೆಸರನ್ನು ಮಾತ್ರ ಅವರು ಬಿಡುಗಡೆ ಮಾಡಿಲ್ಲ ಎಂದು ದೂರಿದ್ದರು.

Leave a Reply

Your email address will not be published. Required fields are marked *

Back to top button