Connect with us

ಎಣ್ಣೆ ವ್ಯಾಪಾರಿ ಕೊಲೆಗೆ ಸುಪಾರಿ: 6 ಆರೋಪಿಗಳ ಬಂಧನ

ಎಣ್ಣೆ ವ್ಯಾಪಾರಿ ಕೊಲೆಗೆ ಸುಪಾರಿ: 6 ಆರೋಪಿಗಳ ಬಂಧನ

– ಎರಡು ಬಾರಿ ಮಾರಣಾಂತಿಕ ಹಲ್ಲೆ ಮಾಡಿದ ಸುಪಾರಿ ಕಿಲ್ಲರ್ಸ್

ರಾಯಚೂರು: ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಾಡ ಹಗಲೇ ನಡೆದಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ರಾಯಚೂರಿನ ಅಡುಗೆ ಎಣ್ಣೆ ಅಂಗಡಿ ವ್ಯಾಪಾರಿ ತಿರುಮಲೇಶ ಸೇರಿ 6 ಜನರನ್ನು ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ವ್ಯಾಪಾರದಲ್ಲಿನ ಅಹಿತಕರ ಪೈಪೋಟಿ ಹಾಗೂ ವೈಷಮ್ಯದಿಂದ ವೀರಭದ್ರೇಶ್ವರ ಎಣ್ಣೆ ಅಂಗಡಿ ಮಾಲೀಕ ನರಸಿಂಹ ಮೂರ್ತಿ ಮೇಲೆ ಎರಡು ಬಾರಿ ಮಾರಣಾಂತಿಕ ಹಲ್ಲೆ ನಡೆದಿತ್ತು. ತಿರುಮಲೇಶ್, ಆತನ ಸಹೋದರ ಮಂಜುನಾಥ್, ಮಾವ ದೇವದಾಸ್ ಸೇರಿ ನರಸಿಂಹ ಮೂರ್ತಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು. ಮೂರು ಲಕ್ಷ ರೂಪಾಯಿಗೆ ಕೊಲೆ ಸುಪಾರಿ ಪಡೆದ ರಾಯಚೂರಿನ ಶ್ರೀಕಾಂತ್, ರಾಜೇಶ್, ಸುದರ್ಶನ್ 2017 ಜನವರಿ 4 ಹಾಗೂ ಫೆಬ್ರವರಿ 9 ರಂದು ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ತನಿಖೆಯಲ್ಲಿ ಆರೋಪಿಗಳ ಸುಳಿವು ಸಿಕ್ಕಿದ್ದು ಈ ಆರು ಜನರನ್ನ ಬಂಧಿಸಲಾಗಿದೆ.

ಬಂಧಿತರಿಂದ 4 ಬೈಕ್, ಎರಡು ಲಕ್ಷ ರೂಪಾಯಿ ನಗದು, ಒಂದು ಲಾಂಗ್ ಜಪ್ತಿ ಮಾಡಲಾಗಿದೆ. ಸುಪಾರಿ ಪಡೆದ ಮೂವರು ಆರೋಪಿಗಳು ಈ ಹಿಂದೆ ಕೊಲೆ ಯತ್ನ ಪ್ರಕರಣ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದಾರೆ.

Advertisement
Advertisement