ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಗೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಹಾಗೂ ದೀಪಿಕಾ ಪಡುಕೋಣೆ ಆಗಮಿಸಲಿದ್ದಾರೆ. ಅಯ್ಯೋ, ಹೌದಾ ನಮ್ಗೆ ಗೊತ್ತೇ ಇಲ್ಲ ಅಂತ ಗಾಬರಿಯಾಗಬೇಡಿ.
ಕಳಸ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೆನ್ನಯ್ಯ ಮಾಡಿದ ರಸ್ತೆ ಮೂರೇ ತಿಂಗಳಿಗೆ ಅಡಿಯಷ್ಟು ಗುಂಡಿ ಬಿದ್ದು ಹಾಳಾಗಿ ಹೋಗಿದೆ. ಇದರಿಂದಾಗಿ ಸ್ಥಳೀಯರು ಸರ್ಕಾರದ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಕಳಸ ಪಟ್ಟಣದ ಯುವಕರು ಗುಂಡಿ ಬಿದ್ದ ರಸ್ತೆಯನ್ನ ಸ್ವಿಮ್ಮಿಂಗ್ ಪೂಲ್ ನಂತೆ ಫೋಟೋಶಾಪ್‍ನಲ್ಲಿ ಎಡಿಟ್ ಮಾಡಿ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ದೀಪಿಕಾ ಪಡುಕೋಣೆ ಹಾಗೂ ಸನ್ನಿ ಲಿಯೋನ್‍ರನ್ನು ಕೂರಿಸಿ ಇಂದು ಬೆಳಗ್ಗೆ ಸನ್ನಿ ಹಾಗೂ ಪಡುಕೋಣೆ 10 ಗಂಟೆಗೆ ಈಜು ಕೊಳವನ್ನ ಉದ್ಘಾಟಿಸಲಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ
ಇದೇ ಈಜು ಕೊಳದ ಬಳಿ ತಮಿಳಿನ ಖ್ಯಾತ ನಟ ವಿಜಯ್ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಕೂಡ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಮೂರು ತಿಂಗಳ ಹಿಂದೆ ಬಾಳೂರು ಹ್ಯಾಂಡ್‍ಪೋಸ್ಟ್ ನಿಂದ ಕಳಸಾದ ಅಂಬಾತೀರ್ಥ ಬಸ್ ನಿಲ್ದಾಣದವರೆಗೆ ನಿರ್ಮಿಸಿರೋ ರಸ್ತೆ ಇದಾಗಿದೆ. ಎರಡು ವರ್ಷ ನಿರ್ವಹಣೆಯ ಜವಾಬ್ದಾರಿ ಹೊತ್ತಿರೋ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಎಂಜಿನಿಯರ್ ಚೆನ್ನಯ್ಯ ಹಾಗೂ ಕಂಟ್ರಾಕ್ಟರ್ ಹಾಲಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.