Connect with us

Latest

ಅಯೋಧ್ಯೆಯ ವಿವಾದಿತ ಜಾಗ ಕೈಬಿಡಲು ಮುಂದಾದ ಸುನ್ನಿ ವಕ್ಫ್ ಮಂಡಳಿ

Published

on

– ಮಧ್ಯಸ್ಥಿಕೆ ಸಮಿತಿಗೆ ನಿರ್ಧಾರ ತಿಳಿಸಿದ ವಕ್ಫ್ ಮಂಡಳಿ
– ಇಂದಿಗೆ ಸುಪ್ರೀಂನಲ್ಲಿ ವಾದ ಮುಕ್ತಾಯ

ನವದೆಹಲಿ: ಅಯೋಧ್ಯೆಯ ವಿವಾದಿತ ಜಾಗದ ಕುರಿತಾದ ತನ್ನ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಪ್ರಸ್ತಾಪಿಸಿದೆ. ಸರ್ಕಾರವು ರಾಮ ಮಂದಿರಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು  ಸುನ್ನಿ ವಕ್ಫ್ ಮಂಡಳಿ ಹೇಳಿದೆ ಸುಪ್ರೀಂ ಕೋರ್ಟಿನ ಮಧ್ಯಸ್ಥಿಕೆ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಕ್ಫ್ ಮಂಡಳಿಯು ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಲು ಒಪ್ಪಿದ್ದಲ್ಲದೆ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಮಸೀದಿಗಳನ್ನು ಸರ್ಕಾರವು ನವೀಕರಿಸಬೇಕೆಂದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ವಕ್ಫ್ ಮಂಡಳಿಯು ಬೇರೊಂದು ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಮುಂದಾಗಿದೆ. 134 ವರ್ಷಗಳ ಹಳೆಯ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಪ್ರಗತಿಗೆ ಕಾರಣವಾಗುವ ವರದಿಯನ್ನು ಮೂಲಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಅಯೋಧ್ಯೆ ಕೇಸ್ – ಸುಪ್ರೀಂನಲ್ಲಿ ಹೈಡ್ರಾಮಾ, ದಾಖಲೆ ಹರಿದ ಮುಸ್ಲಿಂ ಪರ ವಕೀಲ

ವಕ್ಫ್ ಮಂಡಳಿಯು ಭಾರತೀಯ ಪುರಾತತ್ವ ಇಲಾಖೆ(ಎಎಸ್‍ಐ) ಮಸೀದಿಗಳ ಪಟ್ಟಿಯನ್ನು ಸಲ್ಲಿಸಬಹುದು. ಜೊತೆಗೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯು ಪ್ರಾರ್ಥನೆಗಾಗಿ ಸ್ಥಳದ ಹೆಸರನ್ನು ಪ್ರಸ್ತಾಪಿಸಬಹುದು ಎಂದು ಮಧ್ಯಸ್ಥಿಕೆ ಸಮಿತಿ ವರದಿ ಹೇಳುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ.

ಇಂದಿಗೆ ಮುಕ್ತಾಯ: ಸರಿಸುಮಾರು ಒಂದು ಶತಮಾನದಿಂದ ಹಿಂದೂ ಮುಸ್ಲಿಮರ ನಡುವೆ ಕಗ್ಗಂಟಾಗಿ ಪರಿಣಮಿಸಿದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ ದೇಶದ ಹೈಪ್ರೊಫೈಲ್ ಕೇಸ್ ಅಯೋಧ್ಯೆಯ ಬಾಬ್ರಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ ಆರಂಭದಿಂದ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 40 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ್ದು ಇಂದು ಮುಕ್ತಾಯವಾಗಿದೆ. ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿ ಆಗುತ್ತಿದ್ದು, ಅಷ್ಟರೊಳಗೆ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಹೀಗಾಗಿ ಕುತೂಹಲ ಗರಿಗೆದರಿದೆ.

ಲೆಕ್ಕಾಚಾರಗಳು ಜೋರಾಗಿವೆ. ಅಯೋಧ್ಯೆ ವಿವಾದ ಮೇಲ್ನೋಟಕ್ಕೆ ಹಿಂದೂ ಮುಸ್ಲಿಮರ ನಡುವಣ ವಿವಾದವಾಗಿ ಕಾಣಿಸುತ್ತೆ. ಆದ್ರೆ, ಇದು ಕೋಟಿ ಕೋಟಿ ಹಿಂದೂಗಳು- ಮುಸ್ಲಿಮರ ಪಾಲಿಗೆ ಭಾವನಾತ್ಮಕ ವಿಚಾರ. ಇದೇ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಹೋರಾಟ ಸಂಘಟಿಸಿದ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಘಟಾನುಘಟಿ ನಾಯಕರನ್ನು ಕೋರ್ಟ್ ಕಟಕಟೆಗೆ ಎಳೆದುತಂದು ನಿಲ್ಲಿಸಿದೆ. ಎರಡು ಧರ್ಮಗಳ ನಡುವೆ ಅಂತರ ಹೆಚ್ಚಿಸಿದೆ. ಅಪಾರ ಸಾವು ನೋವಿಗೂ ಪರೋಕ್ಷವಾಗಿ ಕಾರಣವಾಗಿದೆ.

ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ನಾಶ ಮಾಡಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ ಎಂಬುದು ಇಲ್ಲಿ ವಿವಾದ. ಇದೇ ಸ್ಥಳದಲ್ಲಿ ಮತ್ತೆ ರಾಮಮಂದಿರ ನಿರ್ಮಿಸಬೇಕೆಂದು ಆರಂಭದಿಂದಲೂ ರಾಮನನ್ನು ಪೂಜಿಸುವ ಸನ್ಯಾಸಿಗಳ ಸಂಘಟನೆ ನಿರ್ಮೋಹಿ ಅಖಾಡ ಒತ್ತಾಯ ಮಾಡುತ್ತಿದೆ. ಇನ್ನು ವಿವಾದಾಸ್ಪದ ಸ್ಥಳವನ್ನು ತಮ್ಮ ವಶಕ್ಕೆ ನೀಡಬೇಕು. ಅಲ್ಲಿ ಮಂದಿರ ನಿರ್ಮಿಸುತ್ತೇವೆ ಎಂದು ವಿಹೆಚ್‍ಪಿ ಸದಸ್ಯರನ್ನು ಒಳಗೊಂಡ ರಾಮ್ ಲಲ್ಲಾ ಎಂಬ ಸಂಘಟನೆ, ಆರ್‍ಎಸ್‍ಎಸ್ ಸದಸ್ಯರೇ ಹೆಚ್ಚಿರುವ ರಾಮ್ ಜನ್ಮಸ್ಥಾನ್ ಎಂಬ ಸಂಘಟನೆ ಆಗ್ರಹಿಸಿದ್ದವು. ನಂತರದ ದಿನಗಳಲ್ಲಿ ವಿಹೆಚ್‍ಪಿಯ ರಾಮಜನ್ಮಭೂಮಿ ನ್ಯಾಸ್ ಜೊತೆ ಜೊತೆಗೆ ಹಿಂದೂ ಮಹಾಸಭಾ ಕೂಡ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದವು. ಇಲ್ಲಿ ರಾಮ್ ಲಲ್ಲಾ ಸಂಘಟನೆ ಒಂದು ಕಡೆ ನಿಂತರೆ ಉಳಿದ ಹಿಂದೂ ಪರ ಸಂಘಟನೆಗಳು ಇನ್ನೊಂದು ಕಡೆ ನಿಲ್ಲುತ್ತವೆ.

ಬಾಬ್ರಿ ಮಸೀದಿ ಸ್ಥಳವನ್ನು ತಮ್ಮದು ಎಂದು ಅಖಿಲ ಭಾರತ ಶಿಯಾ ಕಾನ್ಫರೆನ್ಸ್, ಸುನ್ನಿ ವಕ್ಫ್ ಬೋರ್ಡ್‍ಗಳು ಎಂದು ವಾದ ಮಂಡಿಸುತ್ತಿವೆ. ಆದ್ರೆ ಮೊದಲಿನಿಂದಲೂ ಬಾಬ್ರಿ ಮಸೀದಿ ಸ್ಥಳಕ್ಕಾಗಿ ಹೋರಾಟ ಮಾಡ್ತಿರೋದು ಸುನ್ನಿ ವಕ್ಫ್ ಬೋರ್ಡ್. 1961ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ವಿವಾದಿತ 2.77 ಎಕರೆ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದಕ್ಕೆ ಆಕ್ಷೇಪಗಳು ಕೇಳಿಬಂದು ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮೊದಲು ಸಂಧಾನದ ಮೂಲಕ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ ಪ್ರಯತ್ನಿಸಿತ್ತು. ಆದ್ರೆ ಇದು ವಿಫಲವಾದ ಹಿನ್ನೆಲೆಯಲ್ಲಿ ಪ್ರತಿದಿನ ವಿಚಾರಣೆ ನಡೆಸಿ ವಿವಾದ ಬಗೆಹರಿಸಲು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ರಚಿಸಿತ್ತು.

ಈ ನಡುವೆ, ಇಡೀ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳ್ತಿದ್ದಾರೆ. ಒಂದೇ ಒಂದು ಇಂಚು ಭೂಮಿಯನ್ನು ಮುಸ್ಲಿಮರಿಗೆ ನೀಡಬಾರದು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಒತ್ತಾಯ ಮಾಡ್ತಿದ್ದಾರೆ. ಈ ನಡುವೆ, ಲೋಕಸಭೆ ಚುನಾವಣೆಗೂ ಮುನ್ನ, ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಿಸಬೇಕು ಎಂಬ ಕೂಗು ಕೂಡ ಕೇಳಿಬಂದಿತ್ತು.

Click to comment

Leave a Reply

Your email address will not be published. Required fields are marked *