ಉಡುಪಿ: ಮುಸ್ಲಿಂ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ನಾನು ಕರೆ ಕೊಡುತ್ತೇನೆ. ಅಲ್ಲಿರುವ ವ್ಯವಸ್ಥೆ ನಿಮ್ಮನ್ನು ಬಗ್ಗುಬಡಿಯುವ ಹಾಗೂ ಮುಸುಕಿನಲ್ಲಿ ಇರಿಸುವ ಪ್ರಯತ್ನ ಮಾಡಿತ್ತು. ತ್ರಿವಳಿ ತಲಾಕ್ ರದ್ದುಪಡಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನಮ್ಮ ಸರ್ಕಾರ ಭದ್ರತೆ ನೀಡಿದೆ ಎಂದು ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ತರಗತಿಗಳಲ್ಲಿ ಹಿಜಬ್‍ಗಾಗಿ ಹೋರಾಟದ ವಿಚಾರ ಕುರಿತು ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರು ಮುಖ್ಯವಾಹಿನಿಗೆ ಬನ್ನಿ ಎಂದು ಕರೆಕೊಡುತ್ತೇವೆ. ಜಗತ್ತಿನ ಯಾವುದೇ ದೇಶದಲ್ಲಿ ಇರದ ಅನಿಷ್ಠ ಪದ್ಧತಿ ಈ ದೇಶದಲ್ಲಿ ಇಂದಿಗೂ ಮುಂದುವರೆಯುತ್ತಿದೆ. ಅದನ್ನು ಬಿಟ್ಟು ಹೊರಗೆ ಬರುವ ಪ್ರಯತ್ನ ಮಾಡಿದರೆ ಈ ಸಮಾಜದಲ್ಲಿ ಗೌರವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆ ರೀತಿಯ ಜಾಗೃತಿ ಅವರ ಮನೆಯಲ್ಲಿಯೇ ಆಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ‘ಚುನವಿ ಹಿಂದೂ’ – ‘ಗಂಗಾ ಆರತಿ’ ಪೂಜೆಗೈದ ರಾಗಾ ವಿರುದ್ಧ ಬಿಜೆಪಿ ವ್ಯಂಗ್ಯ
ಕಾನೂನು ಗೌರವಿಸದಿದ್ದರೆ ಇಲ್ಲಿರಲು ಅರ್ಹರಲ್ಲ
ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಸಂಬಂಧ ರಾಜ್ಯ ಸರ್ಕಾರ ಕಾನೂನು ಮಾಡಿದೆ. ಈ ಕಾನೂನನ್ನು ಎಲ್ಲರು ಗೌರವಿಸಬೇಕು. ಇಲ್ಲದಿದ್ದರೆ ಇದರ ಹಿಂದೆ ಯಾವುದೋ ದೊಡ್ಡ ಪ್ರಮಾಣದ ಹಿಡನ್ ಅಜೆಂಡಾ ಇದೆ ಎಂಬುದು ಅರ್ಥ. ಆ ಹಿಡನ್ ಅಜೆಂಡಾವನ್ನು ಸರ್ಕಾರ ಬಗ್ಗು ಬಡಿಯುತ್ತದೆ ಎಂದು ಭರವಸೆ ಕೊಟ್ಟರು.
ಈ ನೆಲದ ಕಾನೂನನ್ನು ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಅದನ್ನು ಯಾರು ಗೌರವಿಸುವುದಿಲ್ಲವೋ ಅವರು ಈ ನೆಲದಲ್ಲಿ ಇರಲು ಅನರ್ಹರು. ಸುತ್ತೋಲೆ, ಕಾನೂನುಗಳಿಗಿಂತ ಹೆಚ್ಚಾಗಿ, ಶಾಲಾ-ಕಾಲೇಜುಗಳಲ್ಲಿ ಎಲ್ಲರೂ ಒಟ್ಟಾಗಿ ಸಮಾನತೆಯಿಂದ ಶಿಕ್ಷಣ ಕಲಿಯಬೇಕು ಎಂಬುದು ನಮ್ಮ ಪರಂಪರೆಯಲ್ಲಿಯೇ ಇದೆ. ಇದರಲ್ಲಿ ಮತೀಯ ಸಂಗತಿಗಳು ವಿಜೃಂಭಿಸುವುದು ಒಳ್ಳೆಯದಲ್ಲ ಎಂದು ಮನವಿ ಮಾಡಿದರು.