ಚಿಕ್ಕಮಗಳೂರು: ಸದನದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ (Parashurama Theme Park) ಕಾಮಗಾರಿಯಲ್ಲಿ 11 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದಿದ್ದಾರೆ. ಸರ್ಕಾರ ಇನ್ನೂ 11 ಕೋಟಿ ರೂ. ಬಿಡುಗಡೆಯೇ ಮಾಡಿಲ್ಲ. ಹಣ ಬಿಡುಗಡೆ ಮಾಡದೇ ಅವ್ಯವಹಾರ ಹೇಗೆ ಆಗುತ್ತೆ ಎಂದು ಶಾಸಕ ಸುನಿಲ್ ಕುಮಾರ್ (Sunil Kumar) ಪ್ರಶ್ನಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈ ವೇಳೆ ಹಗರಣ ಪ್ರಕರಣ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ. ನಾನು ಹಗರಣ ಮಾಡಿದ್ದೇನೆ. ನಿಮ್ಮ ಹಗರಣ ತೆಗಿತೀನಿ ಎನ್ನುವ ವರಸೆಯಲ್ಲಿ ಅವರು ಮಾತನಾಡುತ್ತಿದ್ದು, ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಆಶ್ಚರ್ಯ ಮತ್ತು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ವಾಲ್ಮೀಕಿ, ಮೂಡಾ ಹಗರಣ ಬರುವ ತನಕ ಬಿಜೆಪಿ ಹಗರಣ ನಿಮಗೆ ಗೊತ್ತಿರಲಿಲ್ವಾ? ನಿಮ್ಮದೇ ಸರ್ಕಾರ ಇರುವಾಗ ಇಲ್ಲಿಯವರೆಗೂ ಯಾಕೆ ತನಿಖೆ ಮಾಡಲಿಲ್ಲ? ನಿಮ್ಮ ಕಾಲಬುಡಕ್ಕೆ ಬಂದಾಗ ಬಿಜೆಪಿ ಬಗ್ಗೆ ಹೇಳುತ್ತಿದ್ದೀರಿ. ಸಿಎಂ ಸದನದ ಒಳಗೆ ಎಷ್ಟೊಂದು ಸುಳ್ಳು ಹೇಳಿದ್ದಾರೆ. ಸದನದ ಒಳಗೆ ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಎಂದು ಕಂಡಿಲ್ಲ. ಅವ್ಯವಹಾರ ಆಗಿದ್ದರೆ ಯಾವ ತನಿಖೆಯನ್ನು ಬೇಕಾದರೂ ಮಾಡಲಿ. ಸಿಬಿಐ, ಇಂಟರ್ ಪೋಲ್, ಸಿಐಡಿ ಯಾವುದೇ ತನಿಖೆ ಬೇಕಾದರೂ ಮಾಡಿ ಎಂದು ಅವರು ಸವಾಲು ಹಾಕಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶಿರೂರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ಮಾಡಿದ್ದನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಪ್ರಾಕೃತಿಕ ವಿಕೋಪ, ಸಾವು ನೋವನ್ನು ಕಾಂಗ್ರೆಸ್ ಯಾವ ರೀತಿ ಸ್ವೀಕರಿಸಿದೆ ಹಾಗೂ ಕಾಂಗ್ರೆಸ್ ಮನಸ್ಥಿತಿ ಇದರಿಂದ ಅರ್ಥವಾಗುತ್ತದೆ. ಯಾವ ವಿಚಾರದಲ್ಲೂ ಕಾಂಗ್ರೆಸ್‍ಗೆ ನೈಜ ಕಾಳಜಿ ಇಲ್ಲ. ಮಳೆಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕಿತ್ತು. ಆದರೆ, ಕೇಂದ್ರ ಸಚಿವರು ಭೇಟಿ ನೀಡಿದ್ದನ್ನು ಟೀಕೆ ಮಾಡುವುದಾದರೇ ಕಾಂಗ್ರೆಸ್ ಮನಸ್ಥಿತಿಯೇ ಸರಿ ಇಲ್ಲ. ಸಾವಿನ ಜೊತೆಗೂ ಅನುಕಂಪ ತೋರದೆ ಇರುವ ಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ. ಹಗರಣದಲ್ಲಿ ಮುಳುಗಿ ಹೋಗಿರುವ ಸರ್ಕಾರಕ್ಕೆ ಜನರು ಸತ್ತರೇನು ಬಿಟ್ಟರೇನು ರಾಜ್ಯ ಸರ್ಕಾರ ತಲೆ ಕೆಡಿಸಿಕೊಳ್ಳದ ಸ್ಥಿತಿಗೆ ಬಂದಿದೆ ಎಂದು ಅವರು ಕಿಡಿಕಾರಿದ್ದಾರೆ.