ನವದೆಹಲಿ: ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ (Shama Mohamed), ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುರಿತು ನೀಡಿದ ಹೇಳಿಕೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಸಹ ಪ್ರತಿಕ್ರಿಯೆ ನೀಡಿದ್ದು, ಶಮಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕ್ರಿಕೆಟ್‌ನಲ್ಲಿ ದೈಹಿಕ ಸಾಮರ್ಥ್ಯ ಇರಬೇಕು ನಿಜ. ಆದ್ರೆ ಅದೊಂದೇ ಮುಖ್ಯವಾಗುವುದಿಲ್ಲ. ನಾನು, ಈ ಮೊದಲೂ ಹೇಳಿದ್ದೇನೆ, ನೀವು ಸ್ಲಿಮ್ ಆಗಿರುವ ವ್ಯಕ್ತಿಗಳನ್ನ ಬಯಸಿದ್ರೆ ಮಾಡೆಲಿಂಗ್‌ಗೆ ಹೋಗಿ, ಎಲ್ಲಾ ಮಾಡೆಲ್‌ಗಳನ್ನ ಆಯ್ಕೆ ಮಾಡಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್‌ನಲ್ಲಿ ಮಾನಸಿಕತೆಯೂ ಹೆಚ್ಚು ಮುಖ್ಯವಾಗುತ್ತದೆ, ಅದಕ್ಕಾಗಿ ಅವರು ಎಷ್ಟು ಚೆನ್ನಾಗಿ ಆಡುತ್ತಾರೆ ಅನ್ನೋದನ್ನು ನೋಡಬೇಕಾಗುತ್ತದೆ. ನಾವು ಸರ್ಫರಾಜ್ ಖಾನ್ ಬಗ್ಗೆ ಮಾತನಾಡಿದ್ದೇವೆ. ಅವರು ದಪ್ಪ ಇದ್ದಾರೆ ಅನ್ನೋ ಕಾರಣಕ್ಕೆ ಬಹಳ ಸಮಯದವರೆಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿಲ್ಲ. ಆದ್ರೆ ಭಾರತ ತಂಡಕ್ಕೆ ಸೇರ್ಪಡೆಯಾದ ನಂತರ ಅವರ ಪ್ರದರ್ಶನ ಅಮೋಘವಾಗಿದೆ. ಕೊನೆಯಬಾರಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡಿದಾಗಲೂ ಒಂದೇ ಇನ್ನಿಂಗ್ಸ್‌ನಲ್ಲಿ 150 ರನ್ ಗಳಿಸಿದ್ದರು ಎಂದು ಸ್ಮರಿಸಿದರು.
ಶಮಾ ಹೇಳಿದ್ದೇನು?
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಶಮಾ, ರೋಹಿತ್ ಶರ್ಮಾ (Rohit Sharma) ದಪ್ಪಗಿದ್ದಾರೆ. ಅವರು ತೂಕ ಕಳೆದುಕೊಳ್ಳಬೇಕಾಗಿದೆ, ರೋಹಿತ್ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಬರೆದುಕೊಂಡಿದ್ದರು. ಶಮಾ ಹೇಳಿಕೆಗೆ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಛೀಮಾರಿ ಹಾಕಿದ್ದು, ಟ್ವೀಟ್ ಡಿಲೀಟ್ ಮಾಡುವಂತೆ ತಾಕೀತು ಮಾಡಿತ್ತು.
ಶಮಾ ಮೊಹಮ್ಮದ್ ಯಾರು?
ಶಮಾ ಮೊಹಮ್ಮದ್ 1973ರ ಮೇ 17 ಕೇರಳದ ಕಣ್ಣೂರು ಜಿಲ್ಲೆಯ ಚೆರುಕಲ್ಲೈನಲ್ಲಿ ಜನಿಸಿದರು. ಶಮಾ ಮೊಹಮ್ಮದ್ ಕಾಂಗ್ರೆಸ್ ವಕ್ತಾರರಾಗಿರುವುದರ ಜೊತೆಗೆ ದಂತವೈದ್ಯರೂ ಆಗಿದ್ದಾರೆ. ಕೇರಳ ಮೂಲದ ವೈದ್ಯೆಯಾದ ಶಮಾ 2015 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಮೂಲಗಳ ಪ್ರಕಾರ ಶಮಾ ಕುವೈತ್‌ನ ಇಂಡಿಯನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಪದವಿ ಪಡೆದರು. 2018 ರಲ್ಲಿ ಕಾಂಗ್ರೆಸ್ ಅವರನ್ನು ಮೊದಲ ಬಾರಿಗೆ ತನ್ನ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ನೇಮಿಸಿತು. ನಂತರ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಲಾಯಿತು.