ಸಾಮಾನ್ಯವಾಗಿ ಸಂಡೆ ಮನೆಮಂದಿಯೆಲ್ಲಾ ಮನೆಯಲ್ಲೇ ಇರುತ್ತಾರೆ. ಏನಾದರೂ ಸ್ಪೆಷಲ್ ಅಡುಗೆ ಮಾಡಬೇಕಲ್ವ ಏನ್ ಮಾಡೋದಪ್ಪ ಎಂದು ಯೋಚನೆ ಮಾಡ್ತಿದ್ದೀರಾ? ಚಿಂತೆ ಬೇಡ ನಿಮಗಾಗಿಯೇ ಸಂಡೆ ಸ್ಪೆಷಲ್ ಮಟನ್ ಕೈಮಾ ಬಾಲ್ಸ್ ಸಾಂಬರ್ ಮಾಡೋ ಸುಲಭ ವಿಧಾನ ಇಲ್ಲಿದೆ.
ಮಟನ್ ಸಾಂಬರ್ ಮಾಡೋದು ಕಾಮನ್. ಆದರೆ ಸ್ಪೇಷಲ್ ಆಗಿ ರುಚಿಕರ ಮಟನ್ ಕೈಮಾ ಬಾಲ್ಸ್ ಸಾಂಬರ್ ಮಾಡಿ ರಜಾ ಮಜಾವನ್ನು ಮಟನ್ ಊಟದೊಂದಿಗೆ ಎಂಜಾಯ್ ಮಾಡಿ.
Advertisement
Advertisement
ಬೇಕಾಗುವ ಸಾಮಾಗ್ರಿಗಳು:
1. ತೊಳೆದಿಟ್ಟುಕೊಂಡ ಮಟನ್- 1/2 ಕೆ.ಜಿ
2. ಟೊಮೆಟೋ: 1-2 (ಚಿಕ್ಕದಾಗಿ ಕತ್ತರಿಸಿಕೊಳ್ಳಿ)
3. ಈರುಳ್ಳಿ- 2 (ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ)
4. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಅಥವಾ 3 ಚಮಚ
5. ಹುರಿಗಡಲೆ – 3 ಚಮಚ
6. ಖಾರದ ಪುಡಿ – 3 ಚಮಚ
7. ದನಿಯಾ ಪುಡಿ – 2 ಚಮಚ
8. ತೆಂಗಿನ ಕಾಯಿ ತುರಿ: 3/4 ಕಪ್
9. ಏಲಕ್ಕಿ- 1, ಲವಂಗ – 2, ಸ್ವಲ್ಪ ಚಕ್ಕೆ
10. ಗರಂ ಮಸಾಲಾ, ಅರಶಿಣ ಪುಡಿ, ಕಾಳು ಮೆಣಸಿನ ಪುಡಿ – 1/2 ಚಮಚ
11. ಹಸಿಮೆಣಸಿನಕಾಯಿ – 1
12. ಸ್ಪಲ್ಪ ಕೊತ್ತಂಬರಿ ಸೊಪ್ಪು
13. ರುಚಿಗೆ ತಕ್ಕಷ್ಟು ಉಪ್ಪು
14. ಅಡುಗೆ ಎಣ್ಣೆ – 4, 5 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲು 3 ಚಮಚ ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.
* ಬಳಿಕ ತೊಳೆದಿಟ್ಟುಕೊಂಡಿರುವ ಮಟನ್ ಕೈಮಾದಿಂದ ನೀರನ್ನು ಸಂಪೂರ್ಣವಾಗಿ ತೆಗೆಯಿರಿ.
* ನಂತರ ಒಂದು ಪ್ಲೇಟ್‍ನಲ್ಲಿ ಮಟನ್ ಕೈಮಾ ಹಾಕಿಕೊಂಡು ಅದಕ್ಕೆ 1 ಚಮಚ ಖಾರದ ಪುಡಿ, 1 ಕತ್ತರಿಸಿದ ಹಸಿಮೆಣಸಿನಕಾಯಿ, ಅರ್ಧ ಚಮಚ ಕಾಳು ಮೆಣಸಿನ ಪುಡಿ, ಗರಂ ಮಸಾಲೆ, ಅರಶಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿರಿ.
* ಕಲಸಿರುವ ಕೈಮಾ ಮಿಶ್ರಣವನ್ನು ಮಿಕ್ಸಿ ಜಾರ್ ಗೆ ಹಾಕಿ ಮಿಶ್ರಣವನ್ನು ತರಿತರಿಯಾಗಿ ರುಬ್ಬಿಕೊಳ್ಳಿ.
* ಆ ಮೇಲೆ ಸಾಂಬರ್ ಮಸಾಲೆಗಾಗಿ ಮಿಕ್ಸಿ ಜಾರ್ ಗೆ 3/4 ಕಪ್ ತೆಂಗಿನ ಕಾಯಿ ತುರಿ, ಸ್ವಲ್ಪ ಚಕ್ಕೆ, 1 ಏಲಕ್ಕಿ, 2 ಲವಂಗ, 1 ದೊಡ್ಡದಾಗಿ ಹೆಚ್ಚಿರುವ ಈರುಳ್ಳಿ ಹಾಗೂ ಸ್ವಲ್ಪ ನೀರು ಬೆರೆಸಿ ಸಣ್ಣದಾಗಿ ರುಬ್ಬಿಕೊಳ್ಳಿ.
* ಒಂದು ಪಾನ್ ಅನ್ನು ಸ್ಟವ್ ಮೇಲೆ ಇಟ್ಟು ಅದು ಕಾದ ನಂತರ ಅದಕ್ಕೆ 4 ಚಮಚ ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ 1 ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ. ಆ ಮೇಲೆ 1 ಚಿಕ್ಕದಾಗಿ ಕತ್ತರಿಸಿದ ಟೊಮಾಟೋ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ 1-2 ಚಮಚ ಖಾರದ ಪುಡಿ, ಸ್ವಲ್ಪ ಅರಶಿನ ಪುಡಿ, 2 ಚಮಚ ದನಿಯಾ ಪುಡಿಯನ್ನು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
* ಈ ಮಿಶ್ರಣಕ್ಕೆ ರುಬ್ಬಿಕೊಂಡಿರುವ ತೆಂಗಿನ ಕಾಯಿ ಮಿಶ್ರಣ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ನಂತರ ಸಾಂಬರ್ ಹದಕ್ಕೆ ಬರುವಂತೆ ಸ್ವಲ್ಪ ನೀರನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸಾಂಬರ್ ಕುದಿಯಲು ಬಿಡಿ.
ಈಗ ಮಟನ್ ಕೈಮಾ ಮಿಶ್ರಣದಿಂದ ಸಣ್ಣ ಸಣ್ಣ ಕೈಮಾ ಉಂಡೆಗಳನ್ನು ತಯಾರಿಸಿಕೊಳ್ಳಿ. ಬಳಿಕ ಸಾಂಬರ್ ಕುದಿ ಬಂದ ನಂತರ ಅದಕ್ಕೆ ಕೈಮಾ ಉಂಡೆಗಳನ್ನು ನಿಧಾನವಾಗಿ ಹಾಕಿ ಪಾನ್‍ಗೆ ಪ್ಲೇಟ್ ಮುಚ್ಚಿ ಸಣ್ಣ ಉರಿಯಲ್ಲಿ 15 – 20 ನಿಮಿಷ ಬೇಯಲು ಬಿಡಿ. ನಂತರ ಸ್ವಲ್ಪ ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ 2 ನಿಮಿಷ ಕುದಿಯಲು ಬಿಡಿ. ಬಳಿಕ ಅದನ್ನು ಸರ್ವಿಂಗ್ ಪ್ಲೇಟ್‍ಗೆ ಹಾಕಿ ಅನ್ನದ ಜೊತೆ ಅಥವಾ ರೊಟ್ಟಿ, ಚಪಾತಿ ಜೊತೆ ಸವಿದು ಖುಷಿಪಡಿ.