ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹೊಸಬರ ಚಿತ್ರಗಳು ಬರುತ್ತಿದೆ. ಇಂತಹ ಸಮಯದಲ್ಲಿ ಡಬ್ಬಿಂಗ್ ಯಾಕೆ ಬೇಕು ಎಂದು ಹಿರಿಯ ನಟ ಸುಂದರ್ ರಾಜ್ ಪ್ರಶ್ನಿಸಿದ್ದಾರೆ.
ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಡಬ್ಬಿಂಗ್ ವಿರೋಧಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿದ ಅವರು ಡಬ್ಬಿಂಗ್ ಬಂದರೆ ಕಾರ್ಮಿಕ ವರ್ಗ ನಿರ್ನಾಮವಾಗುತ್ತದೆ. ಕನ್ನಡ ಚಿತ್ರಕ್ಕೆ ಈಗಾಗಲೇ ಥಿಯೇಟರ್ ಕೊರತೆ ಇದೆ.ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಬೇಕಿತ್ತು. ಆದರೆ ಅಸಹ್ಯವಾಗಿ ಡಬ್ಬಿಂಗ್ ಮಾಡಲು ಇಳಿದಿದ್ದಾರೆ ಎಂದು ಕಿಡಿ ಕಾರಿದರು.
Advertisement
ಇವತ್ತು ನಟರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಡಾ.ರಾಜ್ ಕಾಲದಲ್ಲಿ ನಮಗೆ ನಮಗೆ ಒಪ್ಪತ್ತಿನ ಊಟಕ್ಕೂ ಸಾಧ್ಯವಿರುತ್ತಿರಲಿಲ್ಲ. ಕಷ್ಟದಿಂದ ಕಟ್ಟಿದ ಚಿತ್ರರಂಗವಿದು. ಡಬ್ಬಿಂಗ್ ತಂದು ಚಿತ್ರರಂಗವನ್ನ ಹಾಳುಮಾಡಬೇಡಿ ಎಂದು ಹೇಳಿದರು.
Advertisement
ಘರ್ಷಣೆಗೆ ಕಾರಣ: ನಮಗೂ ತಮಿಳರಿಗೂ ಕಾವೇರಿ ಗಲಾಟೆ ನಡೆಯುತ್ತಿರುವಾಗಲೇ ತಮಿಳು ಚಿತ್ರ ಡಬ್ಬಿಂಗ್ ಆಗುತ್ತಿದೆ. ಇದರಿಂದಾಗಿ ಕನ್ನಡಿಗರ ಹಾಗೂ ತಮಿಳರ ಮಧ್ಯೆ ಘರ್ಷಣೆ ಕಾರಣವಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ಈ ಆಶಾಂತಿಗೆ ಕಾರಣರಾದ ಡಬ್ಬಿಂಗ್ ಮಾಡುವವರನ್ನು ಗಡೀಪಾರು ಮಾಡಬೇಕು ಎಂದು ವಾಟಾಳ್ ನಾಗರಾಜು ಆಗ್ರಹಿಸಿದರು.
Advertisement
ಮೌನ ಏಕೆ: ಕನ್ನಡ ಸಾಹಿತ್ಯ ಪರಿಷತ್ ಮೌನವಾಗಿದ್ದು, ಸರ್ಕಾರ ಡಬ್ಬಿಂಗ್ ವಿರೋಧಿ ಮಸೂದೆ ತರಬೇಕು. ಕನ್ನಡ ಚಿತ್ರಗಳಿಗೆ, ಕಲಾವಿದರಿಗೆ, ಕಿರುತೆರೆಯ ಭವಿಷ್ಯ ಉಳಿಸಲು ನಮಗೆ ಡಬ್ಬಿಂಗ್ ಬೇಡ. ನನ್ನ 53 ವರ್ಷದ ಹೋರಾಟ ಕನ್ನಡಕ್ಕಾಗಿ ಇದು ಸಾರ್ಥಕವಾಗಬೇಕು. ರಾಜಕೀಯವಾಗಿ ನಾನು ಮಂತ್ರಿ, ಮುಖ್ಯಮಂತ್ರಿ ಯಾಗಬಹುದಿತ್ತು. ಆದರೆ ನಾನು ಕನ್ನಡಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಡಬ್ಬಿಂಗ್ ಮಾಡುವವರು ಕನ್ನಡ ವಿರೋಧಿಗಳು, ದ್ರೋಹಿಗಳು ಎಂದು ವಾಟಳ್ ಕಿಡಿಕಾರಿದರು.
Advertisement
ಪ್ರತಿಭಟಟನೆ ನಮ್ಮ ಹಕ್ಕು: ಸಾಹಿತಿಗಳು, ಬರಹಗಾರರು ಮೌನವಾಗಿದ್ದೀರಿ ಯಾಕೆ? ನೀವು ಮೌನ ಮುರಿದು ಬೀದಿಗಿಳಿದು ಎಲ್ಲರೂ ಹೋರಾಟ ಮಾಟಬೇಕು. ನ್ಯಾಯಾಲಯ ಡಬ್ಬಿಂಗ್ ಗೆ ಅವಕಾಶ ನೀಡಿರಬಹುದು ಆದರೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದು ವಾಟಾಳ್ ನಾಗರಾಜು ತಿಳಿಸಿದರು.
ಪಬ್ಲಿಸಿಟಿ ಇಲ್ಲ: ತಮಿಳು ತೆಲುಗಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಿದೆ. ಆದರೆ ಅಂತಹ ಪಬ್ಲಿಸಿಟಿ ಕನ್ನಡಕ್ಕಿಲ್ಲ. ಇಂತಹ ಪರಿಸ್ಥಿತಿ ಯಲ್ಲಿ ಡಬ್ಬಿಂಗ್ ತರುವುದು ಬೇಡ. ನಮ್ಮ ನಿರ್ಮಾಪಕರು ನೋವು ಅರ್ಥಮಾಡಿಕೊಳ್ಳಬೇಕು. ಎಂದು ನಟಿ ಸಂಜನಾ ಹೇಳಿದರು.
ಶೋಕಿಗಾಗಿ ಕೆಲಸ: ಕನ್ನಡ ಚಿತ್ರರಂಗವನ್ನು ಡಾ ರಾಜ್ ಸೇರಿದಂತೆ ಅನೇಕ ಗಣ್ಯರು ಕಷ್ಟಪಟ್ಟು ಕಟ್ಟಿದ್ದಾರೆ ಇಂತಹ ಚಿತ್ರ ರಂಗವನ್ನು ಡಬ್ಬಿಂಗ್ ಮೂಲಕ ಕೆಡವ ಬೇಡಿ. ಶೋಕಿಗಾಗಿ ನಿರ್ಮಾಪಕರಾಗಬೇಕು ಎಂದವರು ಮಾತ್ರ ಡಬ್ಬಿಂಗ್ ಬೇಕು ಅಂತಿದ್ದಾರೆ. ನಾಡು ನುಡಿ ಭಾಷೆ ಬಗ್ಗೆ ಪ್ರೀತಿ ಇರುವವರು ಇಂತಹ ಕೆಲಸ ಮಾಡೋದಿಲ್ಲ. ನಾನು ಅಂದೂ ಕೂಡ ಡಬ್ಬಿಂಗ್ ವಿರೋಧಿಸಿದ್ದೆ. ಇಂದೂ ವಿರೋಧಿಸುತ್ತೇನೆ ಎಂದು ನಟಿ ಹೇಮಾ ಚೌಧರಿ ಹೇಳಿದರು.
ಲಯ ತಪ್ಪುತ್ತೆ: ಕಾರ್ಪೊರೇಟ್ ಕಂಪನಿಗಳ ಹುನ್ನಾರದಿಂದ ಈ ಡಬ್ಬಿಂಗ್ ಪೆಡಂಭೂತ ಬಂದಿದೆ. ಮಕ್ಕಳ ಮನೋವಿಕಾಸಕ್ಕೆ ಬೇಕಾಗುವಂತ ಸಿನಿಮಾ ಮಾತ್ರ ಬೇಕಾದ್ರೆ ಡಬ್ಬಿಂಗ್ ಮಾಡಿ. ಡಬ್ಬಿಂಗ್ ಸಿನಿಮಾದಿಂದ ಕನ್ನಡ ಭಾಷೆಯ ಲಯ ತಪ್ಪುತ್ತದೆ. ಡಬ್ಬಿಂಗ್ ನಿಂದ ಮುಂದೊಂದು ದಿನ ಕನ್ನಡ ಭಾಷೆ ಅಳಿಸಿ ಹೋಗುತ್ತದೆ ಎಂದು ಸಾಹಿತಿ ಹಾಗೂ ನಿರ್ದೆಶಕ ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.