ನವದೆಹಲಿ: ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇಂದೋರ್ ಕ್ಷೇತ್ರದಿಂದ ಯಾರನ್ನು ಬೇಕಾದರೂ ಆಯ್ಕೆ ಮಾಡಬಹುದು ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಸುಮಿತ್ರಾ ಮಹಾಜನ್ ಅವರು 75 ವರ್ಷದವರಾಗಿದ್ದು, ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಿಂದ 8 ಬಾರಿ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಇಷ್ಟು ದಿನಗಳು ಕಳೆದರೂ ಇಂದೋರ್ ಕ್ಷೇತ್ರದ ಅಭ್ಯರ್ಥಿಯ ಹೆರನ್ನು ಪಕ್ಷದ ನಾಯಕರು ಅಂತಿಮಗೊಳಿಸಿರಲಿಲ್ಲ. ಹೀಗಾಗಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸಂದೇಶ ಹೊರಹಾಕಿದ್ದಾರೆ.
Lok Sabha Speaker Sumitra Mahajan says she doesn't want to contest the 2019 elections, appeals to party to name a candidate from Indore (file pic) pic.twitter.com/smnF7RKxg7
— ANI (@ANI) April 5, 2019
ಈ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸುಮಿತ್ರಾ ಮಹಾಜನ್ ಅವರು, ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಮೂಲಕ ನನ್ನ ಸ್ಪರ್ಧೆಯ ಬಗ್ಗೆ ಇರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುತ್ತಿರುವೆ. ಪಕ್ಷದ ನಾಯಕರು ಯಾರಿಗೆ ಬೇಕಾದರೂ ಇಂದೋರ್ ಕ್ಷೇತ್ರದ ಟಿಕೆಟ್ ನೀಡಲಿ. ಅದಕ್ಕೆ ನನ್ನ ವಿರೋಧವಿಲ್ಲ. ಅವರು ಘೋಷಣೆ ಮಾಡಿದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಯಕರಿಗೆ ಟಿಕೆಟ್ ನೀಡದೇ ಇರಲು ನಿರ್ಧರಿಸಿದೆ. ಸುಮಿತ್ರಾ ಮಹಾಜನ್ ಅವರು ಮುಂದಿನ ವಾರ 76ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎನ್ನಲಾಗುತ್ತದೆ.