ಬೆಂಗಳೂರು: ಬಹುಭಾಷಾ ನಟಿ ಸುಮನ್ ರಂಗನಾಥನ್ ಅವರು ಉದ್ಯಮಿ ಸಜನ್ ಅವರ ಜೊತೆ ಸೋಮವಾರದಂದು ಸರಳವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ, ತೆಲಗು, ತಮಿಳು, ಹಿಂದಿ, ಭೋಜ್‍ಪುರಿ ಹೀಗೆ ಬಹುಭಾಷೆಗಳಲ್ಲಿ ಸಿನಿಮಾ ಮಾಡಿ ಮಿಂಚಿರುವ ಚಂದನವನದ ಚೆಲುವೆ ಸುಮನ್, ಉದ್ಯಮಿ ಸಜನ್ ಅವರನ್ನು ವರಿಸಿದ್ದಾರೆ. ಮೂಲತಃ ಕೊಡಗಿನವರಾದ ಸಜನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಿಂದೆ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಹೇಳದ ಸುಮನ್ ಅವರು ಮದುವೆಯ ನಂತರ ಮಾಧ್ಯಮಗಳಿಗೆ ತಮ್ಮ ಲವ್ ಸ್ಟೋರಿ ತಿಳಿಸಿದ್ದಾರೆ.
ಸೋಮವಾರದಂದು ಖಾಸಗಿಯಾಗಿ ತಮ್ಮ ಆತ್ಮೀಯ ಬಳಗ ಹಾಗೂ ಕುಟುಂಬಸ್ಥರ ಆಶೀರ್ವಾದ ಪಡೆದು ಸಿಂಪಲ್ ಆಗಿ ಸಜನ್ ಅವರ ಜೊತೆ ಸುಮನ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಬಗ್ಗೆ ತಿಳಿದು ನವ ಜೋಡಿಗೆ ಶುಭಕೋರಲು ಮಾಧ್ಯಮದವರು ಅವರನ್ನು ಭೇಟಿಯಾದಾಗ ಬಹಳ ಉತ್ಸಾಹದಿಂದ ಸುಮನ್ ತಮ್ಮ ಪ್ರೇಮ್ ಕಹಾನಿ ಹಂಚಿಕೊಂಡಿರು.
ತಮ್ಮ ಪತಿ ಬಗ್ಗೆ ಮಾತನಾಡಿದ ಸುಮನ್, 8 ತಿಂಗಳ ಹಿಂದೆ ನಮ್ಮಿಬ್ಬರ ಪರಿಚಯವಾಗಿತ್ತು. ಕೆಲವು ಭೇಟಿ ನಂತರ ಸ್ನೇಹ ಬೆಳೆಯಿತು. ಹೀಗೆ ಭೇಟಿ ಮಾಡುತ್ತಾ ನಾವಿಬ್ಬರು ಪ್ರೀತಿಯಲ್ಲಿ ಬಿದ್ದು, ಡೇಟಿಂಗ್ ಮಾಡಿದೆವು. ಬಳಿಕ ಇದು ಮದುವೆಯಾಗಲು ಸರಿಯಾದ ಸಮಯವೆಂದು ನಿರ್ಧರಿಸಿ, ಎರಡೂ ಕುಟುಂಬದವರ ಒಪ್ಪಿಗೆ ಪಡೆದು ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದರು.
ಯಾಕೆ ನೀವು ಸಿಂಪಲ್ ಆಗಿ ಮದುವೆಯಾಗಿದ್ದು ಎಂದು ಕೇಳಿದಾಗ, ನಾವಿಬ್ಬರು ಕೂಡ ಹೆಚ್ಚಾಗಿ ಯಾರೊಂದಿಗೂ ಬೇರೆಯುವುದಿಲ್ಲ. ಹೆಚ್ಚು ಖಾಸಗಿಯಾಗಿ ಇರಲು ಬಯಸುತ್ತೇವೆ. ಹೀಗಾಗಿ ಸಿಂಪಲ್ ಆಗಿ ಹೊಸ ಜೀವನ ಶುರುಮಾಡಬೇಕೆಂದು ತೀರ್ಮಾನಿಸಿ, ನಮ್ಮ ಆತ್ಮೀಯ ಬಳಗ ಹಾಗೂ ಕುಟುಂಬಸ್ಥರ ನಡುವೆ ವಿವಾಹವಾದೆವು. ನಮ್ಮಿಬ್ಬರ ಆಲೋಚನೆಗಳು ಕೂಡ ಒಂದೇ ರೀತಿ ಇರುವುದೇ ನಾವು ಒಂದಾಗಲು ಕಾರಣ. ನನ್ನ ಪತಿ ಬಹಳ ಸರಳ ಜೀವಿ. ಹೀಗಾಗಿ ಅವರೊಂದಿಗೆ ನಾನು ಬೇರೆಯಲು ಸುಲಭವಾಯ್ತು. ನಮ್ಮಿಬ್ಬರ ಆಲೋಚನೆ, ಜೀವನದ ಹಾದಿ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಆದ್ದರಿಂದ ನಾವು `ಮೇಡ್ ಫಾರ್ ಈಚ್ ಅದರ್’ ಎಂದು ಖುಷಿಯನ್ನು ವ್ಯಕ್ತಪಡಿಸಿದರು.
ಸುಮನ್ ಅವರು ಸಿ.ಬಿ.ಐ ಶಂಕರ್, ಡಾಕ್ಟರ್ ಕೃಷ್ಣ, ನಮ್ಮೂರ ಹಮ್ಮೀರ ಹೀಗೆ ಕನ್ನಡದ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಿಂದಾಸ್, ಬುದ್ಧಿವಂತ, ಸಿದ್ಧ್ ಲಿಂಗು, ಸವಾರಿ, ಕಟಾರಿ ವೀರ ಸುರಸುಂದರಾಂಗಿ, ನೀರ್ ದೋಸೆ ಹೀಗೆ ಇತ್ತೀಚಿಗೆ ತೆರೆಕಂಡ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಬಾಲಿವುಡ್‍ನಲ್ಲೂ ಸುಮನ್ ಮಿಂಚಿದ್ದಾರೆ. ಫರೀಬ್, ಕುರುಕ್ಷೇತ್ರ, ಏಕ್ ಸ್ತ್ರೀ ಹೀಗೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
2012ರಲ್ಲಿ ತೆರೆಕಂಡ ಲೂಸ್ ಮಾದ ಯೋಗಿ ಹಾಗೂ ರಮ್ಯಾ ಅಭಿನಯದ `ಸಿದ್ಧ್ ಲಿಂಗು’ ಚಿತ್ರದಲ್ಲಿ ಆಂಡಾಳಮ್ಮ ಪಾತ್ರದಲ್ಲಿ ಸುಮನ್ ನಟಿಸಿದ್ದರು. ಈ ಚಿತ್ರಕ್ಕಾಗಿ ಫಿಲಂ ಫೇರ್ ಅವಾರ್ಡ್‍ನಲ್ಲಿ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನೂ ಸುಮನ್ ಪಡೆದಿದ್ದರು. ಅಲ್ಲದೆ 2016ರಲ್ಲಿ ತೆರೆಕಂಡ `ನೀರ್ ದೋಸೆ’ ಚಿತ್ರಕ್ಕಾಗಿ ಕನ್ನಡದ ಉತ್ತಮ ಪೋಷಕ ನಟಿ ಎಂದು ಸೈಮಾ ಅವಾರ್ಡ್ ಕೂಡ ಗಳಿಸಿದ್ದಾರೆ. ಅಲ್ಲದೆ ಸದ್ಯ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿ ಕೂಡ ಸುಮನ್ ಮಿಂಚಿದ್ದಾರೆ.