– ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅಂಬಿ ಅದೃಷ್ಟ
ಬೆಂಗಳೂರು: ಜೀವನದ ಅತ್ಯಂತ ಕಷ್ಟದ ಮತ್ತು ದುಃಖದ ಹೊತ್ತಿನಲ್ಲಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ಸಕಲ ಸರ್ಕಾರಿ ಗೌರವ ನೀಡಿದ ಸರ್ಕಾರ, ಪೊಲೀಸ್ ಇಲಾಖೆ, ಮಂಡ್ಯ ಜನತೆ ಹಾಗೂ ಅಭಿಮಾನಿಗಳಿಗೆ ಸುಮಲತಾ ಅಂಬರೀಶ್ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಸುಮಲತಾ ಅವರು, ನಿಮ್ಮ ಸಾಂತ್ವನದ ಮಾತುಗಳು ಮತ್ತು ನಿಮ್ಮ ಪ್ರೀತಿಯ ನಡೆಗಳು ಈ ಸಂಕಷ್ಟದ ಹೊತ್ತಿನಲ್ಲಿ ನಮಗೆ ಶಕ್ತಿ ತುಂಬಿದವು. ನಾನು, ಅಭಿಷೇಕ್ ಮತ್ತು ಅಂಬರೀಶ್ ಇಡೀ ಕುಟುಂಬವು ಕರ್ನಾಟಕದ ಜನತೆಗೆ ಸದಾ ಕಾಲ ಅಭಾರಿಯಾಗಿರುತ್ತೇವೆ. ವಿಶೇಷವಾಗಿ ಅಂಬರೀಶ್ ಅವರನ್ನು ತಮ್ಮ ರಾಜನಂತೆ ಗೌರವರಿಸಿ ಅತ್ಯಂತ ಪ್ರೀತಿಯಿಂದ ಕಳಿಸಿಕೊಟ್ಟ ಮಂಡ್ಯದ ಅಭಿಮಾನಿಗಳು ಮತ್ತು ಎಲ್ಲ ಅಭಿಮಾನಿಗಳಿಗೆ ನಾವುಗಳು ಯಾವಾಗಲು ಚಿರಋಣಿ ಎಂದು ತಿಳಿಸಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಅಂತ್ಯಕ್ರಿಯೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಡುವುದರ ಜೊತೆಗೆ ಅಂಬರೀಶ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಮಂಡ್ಯದ ಸಂಸದ ಸಿ.ಎಸ್.ಪುಟ್ಟರಾಜು ಅವರಿಗೂ, ಇನ್ನಿತರ ಶಾಸಕರು ಮತ್ತು ಸಂಸದರಿಗೂ, ಕರ್ನಾಟಕ ಸರ್ಕಾರಕ್ಕೂ ನಾನು ಈ ಮೂಲಕ ಅಭಿನಂದನೆ ತಿಳಿಸುತ್ತೇನೆ. ಮೂರು ದಿನಗಳ ಕಾಲ ಸತತವಾಗಿ ಶ್ರಮವಹಿಸಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡ ಪೋಲಿಸ್ ಇಲಾಖೆಯವರಿಗೂ, ಅರ್ ಎ ಎಫ್ ಸಿಬ್ಬಂದಿಯವರಿಗೂ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಅಧಿಕಾರಿ ವರ್ಗದವರಿಗೂ ನಾನು ಈ ಮೂಲಕ ಅಭಿನಂದನೆ ತಿಳಿಸಲು ಇಚ್ಚಿಸುತ್ತೇನೆ.
ಅಂಬರೀಶ್ ಅವರು ಮೇಲೆ ಸದಾ ಕಾಲ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿದ ಮಂಡ್ಯ ಜನತೆಯ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಅವರು ಬದುಕಿದ್ದಾಗ ಹೇಗೆ ಪ್ರೀತಿ ಅಭಿಮಾನ ತೋರಿಸಿದರೋ ಹಾಗೆಯೇ ಅವರು ಸತ್ತ ನಂತರವು ಪ್ರೀತಿ ಅಭಿಮಾನಕ್ಕೆ ಯಾವುದೇ ಕೊರತೆಯಾಗದಂತೆ ನಡೆದುಕೊಂಡ ಮಂಡ್ಯದ ಜನತೆಗೆ ನಾನು ಸದಾ ಅಭಾರಿ. ಅವರೊಬ್ಬ ನಟ, ಕೇಂದ್ರದ ಮಂತ್ರಿ, ರಾಜ್ಯದ ಮಂತ್ರಿ, ಒಬ್ಬ ಸೂಪರ್ ಸ್ಟಾರ್, ಎಲ್ಲರಿಗೂ ಒಬ್ಬ ಒಳ್ಳೆಯ ಗೆಳೆಯರಾಗಿದ್ದರು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ಅವರಿಗೆ ದೊಡ್ಡ ಕಳಶದಂತೆ. ಅಂಬರೀಶ್ ಅವರು ನಮ್ಮ ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅವರಿಗೊಂದು ಅದೃಷ್ಟ. ಹಾಗೆಯೇ ಮಂಡ್ಯದ ಮಣ್ಣಿನ ಮಗ ಎನಿಸಿಕೊಳ್ಳಲು ಅಷ್ಟೇ ಅದೃಷ್ಟ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv