ಮೈಸೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ ಎಂದು ಮಂಡ್ಯ ಜಿಲ್ಲಾಧಿಕಾರಿ ನೋಟಿಸ್‍ಗೆ ಸುಮಲತಾ ಲಿಖಿತ ಉತ್ತರ ನೀಡಿದ್ದಾರೆ.
ಚುನಾವಣಾಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಡ ಹೇರಿದ್ದಾರೆ ಎಂಬ ಸುಮಲತಾ ಹೇಳಿಕೆಯನ್ನು ಪ್ರಶ್ನಿಸಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಮಂಜುಶ್ರೀ, ಸುಮಲತಾಗೆ ನೋಟಿಸ್ ನೀಡಿದ್ದರು. ಈ ನೋಟಿಸ್‍ಗೆ ಉತ್ತರ ನೀಡಿರುವ ಸುಮಲತಾ, ನಾನು ಹೇಳಿರುವ ಮಾತುಗಳೆಲ್ಲ ವಾಸ್ತವಾಂಶಕ್ಕೆ ಅನುಗುಣವಾಗಿವೆ. ನಿಮ್ಮ ಹಾಗೂ ನಿಮ್ಮ ಸಿಬ್ಬಂದಿ ನಡವಳಿಕೆ ನೋಡಿ ಆ ಮಾತು ಹೇಳಿದ್ದೇನೆ. ನಾನು ಯಾರನ್ನು ವ್ಯಕ್ತಿಗತವಾಗಿ ಅವಹೇಳನ ಮಾಡಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೆ ನಿಖಿಲ್ ನಾಮಪತ್ರ ಅರ್ಜಿ ಪರಿಶೀಲನೆಯ ವಿಡಿಯೋ ಕೇಳಿದರೆ ನೀವು ಒಂದು ತುಣುಕು ಮಾತ್ರ ಕೊಟ್ಟಿದ್ದೀರಿ ಇದು ಕರ್ತವ್ಯಲೋಪವಲ್ಲವೇ? ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ. ನಿಮ್ಮ ತಪ್ಪುಗಳನ್ನು ಮಾಧ್ಯಮದ ಮುಂದೆ ಹೇಳಿದ್ದೇನೆ. ಇದು ನನ್ನ ಹಕ್ಕು ಊಹಾಪೋಹದ ಮಾಹಿತಿ ಆಧರಿಸಿ ನಾನು ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಅಪರಾಧ ನಾನು ಮಾಡಿಲ್ಲ ಎಂದು ಹೇಳಿದ್ದಾರೆ.
ತಾವು ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದ್ದು, ಇದನ್ನು ಈ ಹಂತದಲ್ಲೇ ಕೈಬಿಟ್ಟು ನ್ಯಾಯ ಪರಿಪಾಲನೆ ಮಾಡಿ ಎಂದು ಕೋರಿದ್ದಾರೆ.