ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಇಂದು ಮುಖಾಮುಖಿ ಎದುರಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಿಖಿಲ್‍ಗೆ ಎದುರಾಗಬಾರದೆಂದು ತಮ್ಮ ಪ್ರಚಾರದ ಸಮಯವನ್ನು ಬದಲಾಯಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ 8.30ಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವಿತ್ತು. ಆದರೆ ಇದೇ ಸಮಯಕ್ಕೆ ನಿಖಿಲ್ ಕೂಡ ಕಾರ್ಯಕ್ರಮ ನಿಗದಿಪಡಿಸಿಕೊಂಡಿದ್ದರು. ಮಾಲಾರ್ಪಣೆ ಬಳಿಕ ಮಂಡ್ಯ ಚರ್ಚ್ ಗೆ ಹಾಗೂ ಮಳವಳ್ಳಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ನಿಖಿಲ್ ಮತ್ತು ಸುಮಲತಾ ನಿಗದಿ ಪಡಿಸಿಕೊಂಡಿದ್ದರು. ಈ ಮೂಲಕ ಇಬ್ಬರು ಎದರು-ಬದುರು ಆಗಬೇಕಿತ್ತು.
ಆದ್ರೆ ಈಗ ಸುಮಲತಾ ತಮ್ಮ ಸಮಯವನ್ನು ಬದಲಾಯಿಸಿಕೊಂಡಿದ್ದು, ಮೊದಲು ಚರ್ಚ್ ಗೆ ಭೇಟಿ ನೀಡಿ ನಂತರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಬಳಿಕ ಮಳವಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ಆಪ್ತ ವಲಯದಿಂದ ಮಾಹಿತಿ ಲಭಿಸಿದೆ. ಇನ್ನು ಸಿಎಂ ಕುಮಾರಸ್ವಾಮಿ ಕೆ.ಆರ್ ನಗರದಲ್ಲಿ, ಶಾಸಕಿ ಅನಿತಾ ಕುಮಾರಸ್ವಾಮಿ ಮಂಡ್ಯ ನಗರದಲ್ಲಿ, ದರ್ಶನ್ ಮದ್ದೂರು, ಯಶ್ ಕೆ.ಆರ್ ಪೇಟೆ ತಾಲೂಕಿನ ವಿವಿಧೆಡೆ ಮತ ಬೇಟೆಯಾಡಲಿದ್ದಾರೆ.