ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆ ದಿನದಿಂದ ದಿನಕ್ಕೆ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಗುರುವಾರ ರಾತ್ರಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಮುಖಂಡರಾದ ಮೀರಾ ಶಿವಲಿಂಗಯ್ಯ ಮನೆಗೆ ಭೇಟಿ ನೀಡಿದ್ದು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಸುಮಲತಾ ಅವರು ಬಿಜೆಪಿ ಮುಖಂಡರ ಮನವೊಲಿಕೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮೀರಾ ಶಿವಲಿಂಗಯ್ಯ ಅವರು ಮಂಡ್ಯದಲ್ಲಿ ಪ್ರಭಾವಿ ಬಿಜೆಪಿ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಮೀರಾ ಶಿವಲಿಂಗಯ್ಯ ಅವರ ಪತಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪ್ರಭಾವಿ ಮುಖಂಡರಾಗಿದ್ದು, ಅವರನ್ನು ಸುಮಲತಾ ಅವರು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮೀರಾ ಅವರ ಮನೆಯಲ್ಲಿ ಚರ್ಚೆ ನಡೆಸಿದ್ದಾರೆ.
ಒಂದು ವೇಳೆ ಸುಮಲತಾ ಅವರು ಬಿಜೆಪಿಯಿಂದ ಸೇರ್ಪಡೆಯಾದರೆ ಏನೆಲ್ಲ ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಯಾಕೆಂದರೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗಲ್ಲ. ಹೀಗಾಗಿ ಮೀರಾ ಶಿವಲಿಂಗಯ್ಯ ಅವರನ್ನು ಭೇಟಿ ಮಾಡಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ದಿನ ಸುಮಲತಾ ಅವರು, ಒಂದು ವೇಳೆ ಬಿಜೆಪಿಯಿಂದ ಆಫರ್ ಬಂದರೆ ನಾನು ಜನರ ಅಭಿಪ್ರಾಯವನ್ನೇ ಕೇಳುತ್ತೇನೆ. ಸದ್ಯಕ್ಕೆ ಇದುವರೆಗೂ ಬಿಜೆಪಿಯಿಂದ ಯಾವುದೇ ಆಫರ್ ಬಂದಿಲ್ಲ. ಯಾರು ಕೂಡ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv