-ಜೆಡಿಎಸ್ ನಾಯಕರ ಹೇಳಿಕೆಗೆ ಖಡಕ್ ತಿರುಗೇಟು
-ಅಂಬಿಯ ಹಿತಶತ್ರು ಡಿಕೆಶಿ ಅಂದ್ರಲ್ಲಾ ರೆಬೆಲ್ ಲೇಡಿ
-ನನ್ನನ್ನು ಕುಗ್ಗಿಸಲು ಕೀಳುಮಟ್ಟದ ರಾಜಕಾರಣ
ಮಂಡ್ಯ: ನಾಲ್ಕು ವಾರಗಳ ಹಿಂದೆ ಇಲ್ಲಿಯೇ ಬಂದು ನಿಂತಿದ್ದೆ. ಈಗ ನಾಲ್ಕು ವಾರಗಳಲ್ಲಿ ಏನೇನು ಕಂಡಿದ್ದೇನೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಮತ್ತೆ ಬಂದಿದ್ದೇನೆ. ಪಕ್ಷದಿಂದ ಉಚ್ಛಾಟನೆಗೊಂಡು ನನ್ನ ಪರ ಪ್ರಚಾರ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ. ಮಂಡ್ಯದ ಕ್ಷೇತ್ರದ ಜನರ ಪ್ರೀತಿಯನ್ನು ಈ ನಾಲ್ಕು ವಾರಗಳಲ್ಲಿ ಕಂಡಿದ್ದೇನೆ. ನಾನು ಮೊದಲು ಹೆಜ್ಜೆ ಇಟ್ಟಾಗ ಒಂಟಿ ಹೋರಾಟವಿತ್ತು. ಇದೀಗ ನೀವೆಲ್ಲರೂ ನನ್ನೊಂದಿಗೆ ಇದ್ದೀರಿ ಎಂದು ಹೇಳುವ ಮೂಲಕ ಮಂಡ್ಯ ಜನರನ್ನು ವಂದಿಸಿದರು.
ಯಾರಿಗೂ ಗೌರವ ನೀಡದ ಸಿಎಂ: ಅಭಿವೃದ್ಧಿ ಪರ ಮಾತಾಡೋದನ್ನು ಬಿಟ್ಟು ಮಹಿಳೆಯರನ್ನು ತೇಜೋವಧೆ ಮಾಡಿ ನನ್ನನ್ನು ಕುಗ್ಗಿಸುವ ಪ್ರಯತ್ನ ಮಾಡಲಾಯಿತು. ರಾಜ್ಯದ ಮುಖ್ಯಮಂತ್ರಿಗಳಿಗೆ ಮಹಿಳೆಯರು, ದೇಶದ ಸೈನಿಕರ ಬಗ್ಗೆ ಗೌರವ ಇಲ್ಲ. ಮಂಡ್ಯದಲ್ಲಿ ನನ್ನ ಪತಿ ಅಂಬರೀಶ್ ಸೇವೆ ಸಲ್ಲಿಸಿದ ಕ್ಷೇತ್ರ. ನಾನು ಹುಚ್ಚೇಗೌಡರ ಸೊಸೆ ನೀವು ಒಪ್ಪಿಕೊಳ್ಳಿ ಬಿಡಿ. ಈಗಾಗಲೇ ಮಂಡ್ಯದ ಜನತೆ ನನಗೆ ಸರ್ಟಿಫಿಕೇಟ್ ನೀಡಿದ್ದಾರೆ. ರಾಜಕಾರಣದಲ್ಲಿ ಎಲ್ಲವನ್ನು ಬಿಟ್ಟು ನಡೆದುಕೊಳ್ಳಬೇಕೆಂದು ಎಲ್ಲಿಯೂ ಬರೆದಿಲ್ಲ.
ಜನರ ಕಣ್ಣೀರು ಒರೆಸಲು ನಾನು ರಾಜಕಾರಣಕ್ಕೆ ಬಂದಿರೋದು. ನಮ್ಮ ಕಣ್ಣೀರು ಒರೆಸಲು ಅವರಿಲ್ಲ ಎಂದು ಹೇಳುವ ಮೂಲಕ ಸಿಎಂ ಕಣ್ಣೀರಿಗೆ ವ್ಯಂಗ್ಯ ಮಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಕರೆಂಟ್, ಕೇಬಲ್ ಕಟ್ ಮಾಡಿಸಿದ್ದರು. ಅಂದು ಏನಾಗಿತ್ತು ಇಂದು ಸಹ ಅದೇ ಮಾಡುತ್ತಿದ್ದಾರೆ. ಒಬ್ಬ ಸುಮಲತಾರನ್ನು ಎದುರಿಸಲು ಕಾಂಗ್ರೆಸ್ ಅಧ್ಯಕ್ಷ, ಆಂಧ್ರ ಸಿಎಂ, ಮೈತ್ರಿ ಸರ್ಕಾರದ ನಾಯಕರು ಬರುತ್ತಾರೆ. ಎಲ್ಲರೂ ಅಭಿವೃದ್ಧಿ ವಿಚಾರ ಬಿಟ್ಟು ಸುಮಲತಾರ ಬಗ್ಗೆ ಮಾತನಾಡುತ್ತಾರೆ ಎಂದರು.
ಹಿತ ಶತ್ರು: ಡಿಕೆ ಶಿವಕುಮಾರ್ ಅವರು ನಿಖಿಲ್ ಕುಮಾರಸ್ವಾಮಿಗೆ ಮತ ಹಾಕಿದ್ರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೇಳುತ್ತಾರೆ. ಅಂಬರೀಶ್ ರಾಜಕೀಯದಲ್ಲಿ ಯಾರ ಬಗ್ಗೆಯೂ ಮಾತನಾಡಿಲ್ಲ. ಆದ್ರೆ ಅದೇ ಅಂಬರೀಶ್ ಅವರನ್ನು ರಾಜಕೀಯದಲ್ಲಿ ದ್ವೇಷ ಮಾಡುತ್ತಿದ್ದ ಓರ್ವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂಬ ಗಂಭೀರ ಆರೋಪ ಮಾಡಿದರು. ರಾಜಕೀಯದಲ್ಲಿ ಇದು ನನ್ನ ಮೊದಲ ಹೆಜ್ಜೆ. ಆದರೆ ಅಂಬರೀಶ್ ಜೊತೆಯಲ್ಲಿದ್ದರಿಂದ ರಾಜಕಾರಣದ ವಿಷಯಗಳು ಗೊತ್ತಿದೆ.
ಮಂಡ್ಯ ದುರಂತ: ನನ್ನ ನೋವನ್ನು ಮರೆತು ನಿಮ್ಮೊಂದಿಗೆ ಇರಲು ಬಂದೆ. ಆದರೆ ಪದೇ ಪದೇ ಅದನ್ನು ನೆನಪು ಮಾಡಿ ನೋವುಂಟು ಮಾಡುತ್ತಿದ್ದಾರೆ. ಈ ಕಣ್ಣೀರಿನ ಹಿಂದೆ ಈಗ ನೀವು ನೀಡಿದ ಧೈರ್ಯವಿದೆ. ಅಂದು ಮಂಡ್ಯ ದುರಂತ ಕಂಡ ಅಂಬರೀಶ್ ನಾನು ಅಲ್ಲಿಗೆ ಹೋಗಲು ಆಗುತ್ತಿಲ್ಲ ಎಂದು ನೊಂದು ಮಾತನಾಡಿದ್ರು. ಆಗ ಟಿವಿ ನೋಡದಂತೆ ಮನವಿ ಮಾಡಿದೆ. ಅಂದೇ ರಾತ್ರಿ 9 ಗಂಟೆ ವೇಳೆಗೆ ಅವರಿಗೆ ಹೃದಯಘಾತವಾಗಿತ್ತು. ನನಗೆ ಮಾತನಾಡಲು ಆಗದ ಶಾಕ್ ನಲ್ಲಿದೆ. ಮಂಡ್ಯಗೆ ಅವರು ಮಾಡಿದ ಸೇವೆ ಹಾಗೂ ಅರ್ಹತೆ ಕಾರಣದಿಂದ ನೀವು ಇಂದು ಮುಖ್ಯಮಂತ್ರಿಯಾಗಿ ನಿಮ್ಮ ಕರ್ತವ್ಯ ಮಾಡಿದ್ದೀರಿ. ಆದರೆ ನಿಮ್ಮ ಕಾರ್ಯದ ಬಗ್ಗೆ ಕೃತಜ್ಞತೆ ಇದೆ. ನಿಮ್ಮ ಒತ್ತಡದಿಂದಲೇ ಇದನ್ನೆಲ್ಲಾ ಹೇಳಿದ್ದೇನೆ. ವಿನಃ ಸಾರ್ವಜನಿಕರವಾಗಿ ಇಂತಹ ಅಂಶಗಳನ್ನು ಮಾತನಾಡಲು ನನಗೆ ಇಷ್ಟವಿಲ್ಲ ಎಂದರು.
ಮಂಡ್ಯದಲ್ಲಿ ಅಂತರಾಷ್ಟ್ರಿಯ ಮಟ್ಟದ ಕ್ರೀಡಾಂಗಣ ಮಾಡುವ ಉದ್ದೇಶ ಅಂಬರೀಶ್ ಅವರಿಗೆ ಇತ್ತು. ಮಂಡ್ಯ ರಸ್ತೆಗಳನ್ನ ಸಿಂಗಾಪುರದಂತೆ ಮಾಡುವ ಆಸೆ ಹೊಂದಿದ್ದರು. ಅಂಬಿ ಕನಸಿನ ಅಭಿವೃದ್ಧಿಯನ್ನು ಮುಂದಿವರಿಸಲು ನಾನು ಬಂದಿದ್ದು, ಆದರೆ ಎಲ್ಲವನ್ನು 1 ದಿನದಲ್ಲಿ ಮಾಡುತ್ತೇನೆ ಎಂಬ ಸುಳ್ಳು ಆಶ್ವಾಸನೆ ನೀಡಿಲ್ಲ. ನನಗೆ ಒಂದು ಅವಕಾಶ ಕೊಟ್ಟು ನೋಡಿ ನಾನು ಅಂಬರೀಶ್ ಅವರ ಪತ್ನಿ ಎಂಬುವುದನ್ನು ತೋರಿಸುತ್ತೇನೆ. ಇಷ್ಟು ವರ್ಷ ಅವರಿಗೆ ನೀಡಿದ ಪ್ರೀತಿಯನ್ನು ನೀವು ಬಿಟ್ಟುಕೊಟ್ಟಿಲ್ಲ. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ನನ್ನ ಮೇಲೆ ಭರವಸೆ ಇಡಿ, ಅಂಬರೀಶ್ ಎಂದು ನಿಮಗೆ ಮೋಸ ಮಾಡಿಲ್ಲ. ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಸಮಾನರಾಗಿ ಕಾಣುತ್ತಿದ್ದರು. ನಾನು ಆದೇ ದಾರಿಯಲ್ಲಿ ನಡೆಯುತ್ತೇನೆ ಎಂದರು.
ಇಂದು ನಾನು ನಿಮ್ಮಲ್ಲಿ ಕೇವಲ ಮತಗಳನ್ನು ಮಾತ್ರ ಕೇಳುತ್ತಿಲ್ಲ. ಮಂಡ್ಯ ಜನರ ಸ್ವಾಭಿಮಾನವನ್ನು ಭಿಕ್ಷೆಯಾಗಿ ಕೇಳುತ್ತಿದ್ದೇನೆ. ಮಂಡ್ಯದ ಸೊಸೆಯಾಗಿ ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತಿದ್ದು, ಸೆರಗು ಹಿಡಿದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಕೈ ಬಿಡಬೇಡಿ. ಇಂದು ನಾನು ಈ ಹೆಜ್ಜೆ ಹಾಕದಿದ್ದರೆ ಅದು ಅಂಬಿ ಅವರ ನೆನಪುಗಳಿಗೆ ಮಾಡಿದ ಮೋಸ ಆಗುತ್ತದೆ. ನನ್ನ ಮೊದಲ ಹೆಜ್ಜೆ ಕೇವಲ ಭಾವನಾತ್ಮಕ ಹೆಜ್ಜೆ ಆಗಿತ್ತು. ಆದರೆ ಈ 4 ವಾರಗಳ ಅವಧಿಯಲ್ಲಿ ನಾನು ಹಲವು ಸಂಗತಿಗಳನ್ನು ನೋಡಿದ್ದು, ಅಂದು ಅಂಬಿ ಅಣ್ಣನನ್ನು ನೋಡಲು ನಿಮ್ಮ ಹಣ ಏಕೆ ಎಂದು ಪ್ರಶ್ನೆ ಮಾಡಿದ್ದ ಸ್ವಾಭಿಮಾನವನ್ನು ಮತ್ತೆ ನನಗೆ ಕೊಡಿ ಎಂದು ಮನವಿ ಮಾಡಿದರು.