ಮಂಡ್ಯ: ಮಂಗಳವಾರ ಮಂಡ್ಯದಲ್ಲಿ ನಡೆಯುವ ಸಮಾವೇಶಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಆಗಮಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಸುಮಲತಾ ಅವರು ಈ ಬಗ್ಗೆ ಸ್ಟಷ್ಟನೆ ನೀಡಿದ್ದಾರೆ.
ಕೆ.ಆರ್ ನಗರ ತಾಲೂಕಿನ ಮಂಚನಹಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಮಂಗಳವಾರ ನಾನು, ದರ್ಶನ್ ಹಾಗೂ ಯಶ್ ಸೇರಿದಂತೆ ಮಂಡ್ಯದಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ. ಮಂಗಳವಾರದ ಸಮಾವೇಶಕ್ಕೆ ರಜನಿಕಾಂತ್ ಬರುತ್ತಿಲ್ಲ. ನಾನು ರಜನಿಕಾಂತ್ ಅವರನ್ನು ಸಂಪರ್ಕಿಸಿಲ್ಲ. ಇದು ಕೇವಲ ಗಾಳಿ ಸುದ್ದಿ ಎಂದು ಸುಮಲತಾ ಸ್ಪಷ್ಟನೆ ನೀಡಿದರು.
ಜೆಡಿಎಸ್‍ನವರು ಅಂದು ನಾಯ್ಡು ಸಮಾಜದ ಬಗ್ಗೆ ಹೀನಾಯವಾಗಿ ಮಾತನಾಡಿದ್ದರು. ಅಂದು ನಾಯ್ಡು ಅಂತಾ ಅವಮಾನ ಮಾಡಿ ಇಂದು ಚಂದ್ರಬಾಬು ನಾಯ್ಡು ಅವರನ್ನು ಪ್ರಚಾರಕ್ಕೆ ಕರೆತರುತ್ತಿದ್ದಾರೆ. ಹೇಳಿಕೆ ಕೊಡೋದು, ಹೇಳಿಕೆಗಳ ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ನನ್ನ ಫೇಸ್‍ಬುಕ್ ಅಕೌಂಟ್ ಬ್ಲಾಕ್ ಮಾಡಿಸಿದ್ದಾರೆ. ಸಾವಿರಾರು ಜನರಿಗೆ ರೀಚ್ ಆಗಬಾರದು ಎನ್ನುವ ಕಾರಣಕ್ಕೆ ಫೇಸ್ ಬುಕ್ ಬ್ಲಾಕ್ ಮಾಡಿದ್ದಾರೆ. ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ನಾನು ಹೊಸ ಫೇಸ್‍ಬುಕ್ ಪೇಜ್ ತೆರೆದಿದ್ದೇನೆ. ಒಂದು ದಿನದಲ್ಲಿ ಅಭಿಮಾನಿಗಳು ಬೆಂಬಲಿಸುತ್ತಾರೆ ಎಂದು ಅಂದುಕೊಂಡಿದ್ದೇನೆ. ಅವರು ಫೇಸ್‍ಬುಕ್ ಬ್ಲಾಕ್ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಏಕೆಂದರೆ ಜನರಿಗೆ ನಾವು ಈ ಹತ್ತಿರವಾಗಿದ್ದೇವೆ. ಅವರಿಗೆ ಈ ವಿಷಯ ನಡೆದಿದ್ದಕ್ಕೆ ಬೇಜಾರಾಗಿದ್ದಾರೆ ಎಂದರು.
ಎಷ್ಟೇ ಜನರು ಆದರೂ ಪರವಾಗಿಲ್ಲ. ತಲೆಗೆ 500 ರೂ. ಕೊಡ್ತೀನಿ ಕರ್ಕೊಂಡ್ ಬಾ ಎನ್ನುವ ಶಿವರಾಮೇಗೌಡ ಹೇಳಿಕೆಗೆ ಸುಮಲತಾ ಕೆಂಡ ಕಾರಿದ್ದಾರೆ. ಮೊದಲಿನಿಂದ್ಲೂ ಹಣ ಹೆಂಡ ಹಂಚಿಕೊಂಡು, ಅಧಿಕಾರ ದುರ್ಬಳಕ್ಕೆ, ಇನ್ನೊಬ್ಬರಿಗೆ ಟೀಕೆ ಮಾಡುವುದು ಬಿಟ್ಟರೆ ಅವರಿಗೆ ಬೇರೆ ಏನು ಗೊತ್ತಿಲ್ಲ. ಅವರು ಮಾಡಿಕೊಂಡು ಬಂದ ಸ್ಟ್ರಾಟಿಜಿ ಅದು. ಹಾಗಾಗಿ ಅವರು ಮೂವರು ಸುಮಲತಾರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಜನರು ಮರಳಾಗುವುದಿಲ್ಲ. ನನಗೆ ಇದು ಹೊಸದಲ್ಲ ಬಿಡಿ ಎಂದು ಸುಮಲತಾ ಹೇಳಿದರು.
ನಾನು ವಿಜಯ್ ಶಂಕರ್ ಅವರ ಬಗ್ಗೆ ಎಲ್ಲಿ ಆದರೂ ಪ್ರಸ್ತಾಪ ಮಾಡಿದ್ದರೆ ನಾನು ಅದರ ಬಗ್ಗೆ ಮಾತನಾಡುತ್ತೇನೆ. ಎಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಕಾಳಿಕಾಂಬದಿಂದ ರ‍್ಯಾಲಿ ಶುರು ಮಾಡಿ ಸಿಲ್ವರ್ ಜ್ಯೂಬ್ಲಿ ಪಾರ್ಕ್‍ನಲ್ಲಿ ಸಮಾವೇಶ ನಡೆಸಲಿದ್ದೇವೆ ಎಂದು ತಿಳಿಸಿದರು.