ಮಂಡ್ಯ: ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್‍ಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಫೋಟೋಗಳು ರಾರಾಜಿಸುತ್ತಿದೆ.
ಮಂಡ್ಯ ನಗರದ ವಿವಿಧೆಡೆ ಅಳವಡಿಸಿರುವ ನೂತನ ಸಂಸದೆ ಸುಮಲತಾ ಅವರಿಗೆ ಶುಭಾಶಯ ಕೋರಿ ಫ್ಲೆಕ್ಸ್ ಅಳವಡಿಸಲಾಗಿದೆ. ಹೀಗೆ ಅಳವಡಿಸಿರುವ ಫ್ಲೆಕ್ಸ್ನಲ್ಲಿ ಸುಮಲತಾ, ಅಂಬರೀಶ್ ಮತ್ತು ಅಭಿಷೇಕ್ ಫೋಟೋವನ್ನು ಹಾಕಿಸಲಾಗಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿ ಅನೇಕ ಕಾಂಗ್ರೆಸ್ಸಿಗರ ಫೋಟೋಗಳು ರಾರಾಜಿಸುತ್ತಿವೆ.
ಈ ಫ್ಲೆಕ್ಸ್ನಲ್ಲಿ “ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನು ಇಂಡಿಯಾದಲ್ಲಿ ತೋರಿಸಿದ ಸ್ವಾಭಿಮಾನಿ ಮಂಡ್ಯದ ಮತಬಾಂಧವರಿಗೆ ಧನ್ಯವಾದಗಳು” ಎಂದು ಬರೆದಿದೆ. ಮಂಡ್ಯ ಜನರಲ್ಲಿ ಈ ವಿಚಾರ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ನಾಯಕರ ಫೋಟೋಗಳು ರಾರಾಜಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.