ಬೆಂಗಳೂರು: ರೆಬೆಲ್ ಸ್ಟಾರ್, ಮಾಜಿ ಸಚಿವ ದಿ. ಅಂಬರೀಶ್ ಅವರ ಮೊದಲ ಪುಣ್ಯತಿಥಿ ಕಾರ್ಯಕ್ರಮ ಇಂದು ನಡೆಯಿತು. ಅಂಬಿ ಸಮಾಧಿಗೆ ಪತ್ನಿ ಸುಮಲತಾ, ಅಭಿಷೇಕ್ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸುಮಲತಾ, ಒಂದು ವರ್ಷ ಕಳೆದು ಹೋಗಿದ್ಯಾ ಎನಿಸುತ್ತಿದೆ. ಅವರು ಎಲ್ಲಿ ಹೋದ್ರೂ ನೆನಪಾಗ್ತಾರೆ. ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬಿ ಅವರೇ. ಪ್ರತಿಕ್ಷಣ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಪತಿಯನ್ನು ನೆನಪಿಸಿಕೊಂಡು ಭಾವುಕರಾದರು.
ಇದೇ ವೇಳೆ ಅಂಬಿ ಸ್ಮಾರಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾರಕ ನಿರ್ಮಾಣ ಕಾರ್ಯ ತಡವಾಗುತ್ತಿದೆ. ಈಗ ಫಿಲಂ ಚೇಂಬರ್ ಮೂಲಕ ಸರ್ಕಾರವನ್ನು ಸಂಪರ್ಕ ಮಾಡುತ್ತೇವೆ ಎಂದರು.
ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಅಂಬರೀಶ್ ಕುಟುಂಬಸ್ಥರು ಸೇರಿದಂತೆ ನಟ ದರ್ಶನ್, ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ರೆಬೆಲ್ ಸ್ಟಾರ್ ಅಭಿಮಾನಿಗಳು ಸೇರಿದಂತೆ, ಸಿನಿಮಾ ಮತ್ತು ರಾಜಕೀಯ ಗಣ್ಯರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂಬಿ ಸಮಾಧಿಗೆ ಬಿಳಿ, ಕೆಂಪು ಗುಲಾಬಿಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಅಂಬಿಗೆ ಇಷ್ಟವಾದ ಬಿರಿಯಾನಿ, ಉಪ್ಪಿಟ್ಟು, ಕೀರು ಸೇರಿದಂತೆ ಸಿಹಿ ತಿನಿಸು, ತಿಂಡಿ ಇಟ್ಟು ಪೂಜೆ ಮಾಡಲಾಯಿತು.
ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಂಬಿ ಪುಣ್ಯ ತಿಥಿ ಕಾರ್ಯಕ್ರಮದ ಭಾಗವಾಗಿ ಸ್ನೇಹ ಜೀವಿಯ ಸ್ಮರಣಾರ್ಥ ಮಧ್ಯಾಹ್ನದ ಭೋಜನ ಏರ್ಪಡಿಸಲಾಗಿತ್ತು. ಕಳೆದ ವರ್ಷ ನವೆಂಬರ್ 24ರಂದು ಅಂಬರೀಶ್ ಮೃತಪಟ್ಟಿದ್ದರು. ವರ್ಷ ತುಂಬುವುದರೊಳಗೆ ಪುಣ್ಯ ತಿಥಿ ಮಾಡುವ ಕಾರಣದಿಂದ ಹಾಗೂ ಅಂಬರೀಶ್ ನಕ್ಷತ್ರದ ಪ್ರಕಾರ 10 ದಿನಗಳ ಮೊದಲೇ ಪುಣ್ಯತಿಥಿ ಕಾರ್ಯವನ್ನು ಮಾಡಲಾಗಿದೆ.
ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.