ಮಂಡ್ಯ: ನಟ ಚಿರಂಜೀವಿ ಜೊತೆ ಸಂಸದೆ ಸುಮಲತಾ ಅಂಬರೀಶ್ ಅವರು ಡ್ಯಾನ್ಸ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡಿದ್ದರು. ಇದೀಗ ಸುಮಲತಾ ಅವರು ಹಳೆಯ ನೆನಪನ್ನು ಮರಳಿ ತಂದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
ಸುಮಲತಾ ಅವರು ನಾಲ್ಕು ವರ್ಷಗಳ ಹಿಂದೆ ತೆಲುಗು ನಟ ಚಿರಂಜೀವಿ ಮಗಳ ಮದುವೆಯಲ್ಲಿ ಭಾಗವಹಿಸಿದ್ದ ವಿಡಿಯೋ ಹಾಗೂ ಫೋಟೋ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಫೇಸ್‍ಬುಕ್‍ನಲ್ಲಿ “ಈ ಹಿಂದೆ ನಡೆದ ಚಿರಂಜೀವಿ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಅಂಬರೀಶ್ ಅವರೊಂದಿಗೆ 4 ವರ್ಷದ ಹಿಂದಿನ ಹಳೆಯ ನೆನಪುಗಳನ್ನು ಮರಳಿ ತಂದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು” ಎಂದು ಬರೆದು ನಮಸ್ಕರಿಸುವ ಮತ್ತು ನಗುವ ಎರಡು ಎಮೋಜಿಯನ್ನು ಹಾಕಿದ್ದಾರೆ.
ಜೊತೆಗೆ ಚಿರಂಜೀವಿ ಕುಟುಂಬ ಹಾಗೂ ಸುಮಲತಾ ಜೊತೆ ಪತಿ ಅಂಬರೀಶ್ ಇರುವ ಫೋಟೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಕಲಿ ಖಾತೆ ಮೂಲಕ ಚಿರಂಜೀವಿ ಜೊತೆ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಮಾಡಿದ್ದವರಿಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ.
ಆಗಸ್ಟ್ 22 ರಂದು ನಟ ಚಿರಂಜೀವಿ ಅವರ ಹುಟ್ಟುಹಬ್ಬವಿತ್ತು. ಅಂದು ಸುಮಲತಾ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು ಅದರಲ್ಲಿ ಚಿರಂಜೀವಿ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಆದರೆ ಸುಮಲತಾ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿ ಪರ- ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೂ ಮೊದಲೇ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ ಎಂದು ಮಾಹಿತಿ ನೀಡಿ ಸೈಬರ್ ಕ್ರೈಂಗೆ ದೂರು ನೀಡಿದ್ದರು.