ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ನಡುವಿನ ವಾಕ್ ಸಮರ ಸದ್ಯಕ್ಕೆ ನಿಲ್ಲುವ ತರಹ ಕಾಣಿಸುತ್ತಿಲ್ಲ. ಎಟಿಗೆ ಎದುರೇಟು, ಆರೋಪಕ್ಕೆ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದ್ದು, ಇದೀಗ ಉಭಯ ನಾಯಕರ ವಾಗ್ಯುದ್ಧ ಮತ್ತಷ್ಟು ತಾರಕಕ್ಕೇರಿದೆ. ಟೆಂಡರ್ ಕಮಿಷನ್ ವಿಚಾರವಾಗಿ ಜೆಡಿಎಸ್ ಶಾಸಕರ ಪ್ರತ್ಯಾರೋಪಕ್ಕೆ ಅಸಮಾಧಾನಗೊಂಡಿರುವ ಸಂಸದೆ ಸುಮಲತಾ, ಮೇಲುಕೋಟೆ ಚಲುವನಾರಯಣಸ್ವಾಮಿ ಸನ್ನಿಧಿಯಲ್ಲಿ ಆಣೆ ಪ್ರಮಾಣಕ್ಕೆ ಆಹ್ವಾನ ನೀಡುವ ಮೂಲಕ ಸವಾಲು ಹಾಕಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಆರಂಭವಾಗಿರುವ ಜೆಡಿಎಸ್ ನಾಯಕರು ವರ್ಸಸ್ ಸುಮಲತಾ ಅಂಬರೀಶ್ ವಾಕ್ಸಮರ ಯಾಕೋ ನಿಲ್ಲೋತರ ಕಾಣುತ್ತಿಲ್ಲ. ಕೆಲದಿನಗಳಿಂದ ತಣ್ಣಗಿದ್ದ ಉಭಯ ನಾಯಕರ ಟಾಕ್ ಫೈಟ್ ಮತ್ತೆ ತಾರಕಕ್ಕೇರಿದೆ. ಟೆಂಡರ್ ಕಮಿಷನ್ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ಇತ್ತೀಚೆಗೆ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕಮಿಷನ್ ನೀಡದಿದ್ದರೆ ಕೆಲಸ ಮಾಡೋದಕ್ಕೆ ಬಿಡೋದಿಲ್ಲ ಎಂದು ಗುಡುಗಿದರು.
ಸುಮಲತಾ ಆರೋಪಕ್ಕೆ ಸಮರ ಸಾರಿರುವ ಜೆಡಿಎಸ್ ಶಾಸಕರು ನಿರಂತರವಾಗಿ ಪ್ರತ್ಯಾರೋಪ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಸಂಸದೆ ಸುಮಲತಾ ಮೇಲುಕೋಟೆ ಚಲುವನಾರಾಯಣ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣಕ್ಕೆ ಆಹ್ವಾನ ನೀಡುವ ಮೂಲಕ ಸವಾಲು ಹಾಕಿದ್ದಾರೆ.
ಸುಮಲತಾ ಅಂಬರೀಶ್ ಕಮಿಷನ್ ಆರೋಪ ಮಾಡುತ್ತಿದ್ದಂತೆ ಮೊದಲಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಟಾಂಗ್ ಕೊಟ್ಟಿದ್ದರು. ಬಳಿಕ ಸಿ.ಎಸ್.ಪುಟ್ಟರಾಜು, ಡಿ.ಸಿ. ತಮ್ಮಣ್ಣ ಕೂಡ ಸಿಟ್ಟು ಹೊರ ಹಾಕಿದ್ದರು. ಇಂದು ಮಳವಳ್ಳಿ ಶಾಸಕ ಅನ್ನದಾನಿ ಕೂಡ ವಾಗ್ದಾಳಿ ನಡೆಸಿದ್ದು, ಸಂಸದೆ ಸುಮಲತಾ ಬರೀ ಪೋಸ್ ಕೊಡುವ ಕೆಲಸ ಮಾಡ್ತಾರೆ ಎಂದು ಕಿಡಿಕಾರಿದ್ದರು.
ಸುಮಲತಾ ಅವರು, ಜನ ಮರೆತು ಬಿಡುತ್ತಾರೆ ಅಂತ ಮಂಡ್ಯಕ್ಕೆ ಬರುತ್ತಾರೆ. ಚಿಲ್ಲರೆ ಆರೋಪ ಮಾಡೋದನ್ನು ಬಿಟ್ಟು ಕೆಲಸ ಮಾಡಲಿ. ಮಂಡ್ಯಕ್ಕೆ ಕೇಂದ್ರ ಸರ್ಕಾರದಿಂದ ಏನು ಅನುದಾನ ತಂದಿದ್ದಿರಿ? ಮಳವಳ್ಳಿ ಸೊಸೆ ಅಂತ ಹೇಳಿ 30 ಸಾವಿರ ವೋಟ್ ಲೀಡ್ ತೆಗೆದುಕೊಂಡರಿ. ಸೊಸೆ ಅಂತ ಜನ ಕೊಟ್ಟ ಗೌರವವನ್ನು ಉಳಿಸಿಕೊಳ್ಳಿ. ಯಾರು ಏನು ಮಾಡಿದ್ದಾರೆ ಅಂತ ಬಹಿರಂಗ ಚರ್ಚೆ ಬಂದ್ರೆ ಗೊತ್ತಾಗುತ್ತೆ ಎಂದು ಗುಡುಗಿದರು.
ಜೆಡಿಎಸ್ ಶಾಸಕರ ಪ್ರತ್ಯಾರೋಪ ಹಾಗೂ ವಾಕ್ಸಮರಗಳಿಗೆ ಮಂಡ್ಯದಲ್ಲಿಂದು ಸಂಸದೆ ಸುಮಲತಾ ಕೆಂಡಕಾರಿದ್ದಾರೆ. ನಾನು ಕಮಿಷನ್ ಕೇಳಿರುವ ದಾಖಲೆಗಳಿದ್ದರೆ ಮೇಲುಕೋಟೆ ಚೆಲುವನಾರಯಣಸ್ವಾಮಿ ಮುಂದೆ ತರಲಿ. ಆಣೆ-ಪ್ರಮಾಣ ಮಾಡೋಣ. ಯಾರು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಏನು ಆರೋಪ ಮಾಡಬಾರದು. ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ ಸವಾಲು ಹಾಕಿದ್ದಾರೆ. ಅಷ್ಟೆ ಅಲ್ಲದೆ ಧೈರ್ಯವಿದ್ದರೆ ಮಾಧ್ಯಮಗಳ ಮುಂದೆಯೂ ಚರ್ಚೆಗೆ ಬರಲಿ ಆಹ್ವಾನ ನೀಡಿದ್ದಾರೆ.
ಅಲ್ಲದೆ ನಾನು ಬೇರೆ ಅವರ ರೀತಿ ಕದ್ದು ಮುಚ್ಚಿ ಕೆಲಸ ಮಾಡಲ್ಲ. ನಾನು ಪಾರದರ್ಶಕವಾಗಿ ಕೆಲಸ ಮಾಡುತ್ತೇನೆ. ಕೆಲವರು ಅಂಬರೀಶ್ ವಿರುದ್ಧ ಆರೋಪ ಟೀಕೆ ಮಾಡುತ್ತಾರೆ. ಅದು ಅವರ ಅಭಿಮಾನಿಗಳಿಗೆ ನೋವು ತಂದಿದೆ. ಅಂತವರ ಬಗ್ಗೆ ಮಾತನಾಡುವುದು ನಿಮ್ಮ ವ್ಯಕ್ತಿತ್ವ ನಿಮ್ಮ ಸಂಸ್ಕøತಿ ತೋರಿಸುತ್ತದೆ. ಅಂಬರೀಶ್ ಅವರ ಬಗ್ಗೆ ಮಾತನಾಡುವುದು ಹೇಡಿ ಕೆಲಸ. ನಾನು ಇದ್ದೀನಿ ನನ್ನ ಬಗ್ಗೆ ಮಾತನಾಡಿ ಎಂದು ಕಿಡಿಕಾರಿದರು.
ಒಟ್ಟಾರೆ ಕೆಲವು ದಿನಗಳಿಂದ ತಣ್ಣಗಿದ್ದ ಸುಮಲತಾ ಹಾಗೂ ಜೆಡಿಎಸ್ ಶಾಸಕರ ಫೈಟ್ ಮತ್ತೆ ತಾರಕಕ್ಕೇರಿದೆ. ರೆಬಲ್ ಲೇಡಿಯ ಆಣೆ ಪ್ರಮಾಣಕ್ಕೆ ಆಹ್ವಾನಕ್ಕೆ ದಳಪತಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ? ದಾಖಲೆ ಸಹಿತ ಚೆಲುವನಾರಾಯಣನ ಸನ್ನಿಧಿಗೆ ಬರುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.