ಹಿರಿಯ ನಟ ಅಂಬರೀಶ್ (Ambareesh) ಮೊಮ್ಮಗನ ನಾಮಕರಣ ಸಮಾರಂಭ ಇಂದು (ಮಾ.15) ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ನಡೆದಿದೆ. ‘ರಾಣಾ ಅಮರ್ ಅಂಬರೀಶ್’ ಎಂದು ಮುದ್ದಾದ ಹೆಸರನ್ನು ಅಂಬಿ ಮೊಮ್ಮಗನಿಗೆ ಹೆಸರಿಡಲಾಗಿದೆ. ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ದರ್ಶನ್ (Darshan) ಗೈರಾಗಿದ್ದಾರೆ. ಇದನ್ನೂ ಓದಿ:‘ರಾಣಾ ಅಮರ್ ಅಂಬರೀಶ್’ ಎಂದು ಅಂಬಿ ಮೊಮ್ಮಗನಿಗೆ ನಾಮಕರಣ
ಇಂದು ನಡೆದ ಸುಮಲತಾ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ನಟ ದರ್ಶನ್ ಬರುತ್ತಾರೆ ಅನ್ನೋ ಕುತೂಹಲ ಸಹಜವಾಗಿ ಮೂಡಿತ್ತು. ಆದರೆ ದರ್ಶನ್ ಈ ಸಂಭ್ರಮದಿಂದ ದೂರ ಉಳಿದಿದ್ದಾರೆ. ಸುಮಲತಾ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಅಲ್ಲಿ ಹಾಜರಿರುತ್ತಿದ್ದ ದರ್ಶನ್ ಈ ಬಾರಿಯ ಅನುಪಸ್ಥಿತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸುಮಲತಾ ಅಂಬರೀಶ್ ಮನೆಯ ಸಂಭ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಸುದೀಪ್ ಭಾಗಿಯಾಗಿದ್ದಾರೆ. ಕೆಲವೇ ಕೆಲವು ಆಪ್ತರಿ ಹಾಗೂ ಕುಟುಂಬಸ್ಥರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅಲ್ಲದೇ ಈ ಮದರ್ ಇಂಡಿಯಾ ಮನೆಯ ಕಾರ್ಯಕ್ರಮದ ಆಮಂತ್ರಣವನ್ನು ಸ್ವೀಕರಿಸದ ದರ್ಶನ್ ನಡೆ ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸದ್ಯ ದರ್ಶನ್ ‘ಡೆವಿಲ್’ ಚಿತ್ರೀಕರಣಕ್ಕಾಗಿ ಮೈಸೂರಿಗೆ ತೆರಳಿದ್ದರು. ಹೀಗಾಗಿ ಫಾರ್ಮ್‌ಹೌಸ್‌ನಲ್ಲೇ ಈ ವೀಕೆಂಡ್ ಕಳೆಯುತ್ತಿದ್ದಾರಂತೆ ಎನ್ನಲಾಗ್ತಿದೆ.
ಮೊನ್ನೆಯಷ್ಟೇ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅಭಿಷೇಕ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅನ್‌ಫಾಲೋ ಮಾಡಿದ್ದರು. ಅಂಬರೀಶ್ ಕುಟುಂಬದ ಮೇಲೆ ದರ್ಶನ್‌ಗೆ ಮುನಿಸು ಎಂದು ಹೇಳಲಾಗಿತ್ತು. ಆದರೆ, ಆ ರೀತಿಯ ಮುನಿಸು ಯಾವುದೂ ಇಲ್ಲ ಅಂತ ಈಗಾಗಲೇ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಯಾವತ್ತಿದ್ದರೂ ದರ್ಶನ್ ಮನೆಮಗ ಅಂತ ಹೇಳಿದ್ದರು.