ಬೆಂಗಳೂರು: ಹಿರಿಯ ನಟಿ ಸುಮಲತಾ ಅಂಬರೀಶ್ ಈಗ ಸ್ಯಾಂಡಲ್‍ವುಡ್‍ನಲ್ಲಿ ಪಾರ್ವತಮ್ಮ ಆಗಲು ರೆಡಿಯಾಗಿದ್ದಾರೆ. ಆದರೆ ಇವರು ಪಾರ್ವತಮ್ಮ ರಾಜ್‍ಕುಮಾರ್ ಅವರಂತೆ ಚಿತ್ರವನ್ನು ನಿರ್ಮಾಣ ಮಾಡುತ್ತಿಲ್ಲ. ಬದಲಾಗಿ ತೆರೆಯ ಮೇಲೆ ಪಾರ್ವತಮ್ಮ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಹರಿಪ್ರಿಯಾ ನಟಿಸುತ್ತಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಸಮಲತಾ ಅವರು ಪಾರ್ವತಮ್ಮ ಆಗಿ ಮಿಂಚುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಸುಮಲತಾ ನಟಿ ಹರಿಪ್ರಿಯಾ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಹರಿಪ್ರಿಯಾ ಅವರ 25ನೇ ಸಿನಿಮಾ. ಈ ಸಿನಿಮಾ ಮೂಲಕ ಹರಿಪ್ರಿಯಾ ತಮ್ಮ ಸಿಲ್ವರ್ ಜೂಬ್ಲಿಯ ಸಂಭ್ರಮದಲ್ಲಿದ್ದಾರೆ. ಸದ್ಯ ನಿರ್ದೇಶಕ ಶಂಕರ್ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಈ ಚಿತ್ರದ ಶೀರ್ಷಿಕೆಗೂ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದಲ್ಲಿ ಪಾರ್ವತಮ್ಮನ ಮಗಳು ಎಂದು ಹರಿಪ್ರಿಯಾರನ್ನು ಕರೆಯುತ್ತಿರುತ್ತಾರೆ. ಹಾಗಾಗಿ ಈ ಚಿತ್ರಕ್ಕೆ ‘ಡಾಟರ್ ಆಫ್ ಪಾರ್ವತಮ್ಮ’ ಎಂದು ಟೈಟಲ್ ಇಡಲಾಗಿದೆ.
ಮೊದಲ ಬಾರಿಗೆ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಈಗ ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್ ಒಟ್ಟಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.