ಮಂಡ್ಯ: ಸ್ಯಾಂಡಲ್ ವುಡ್ ನಟ ದಿ.ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸಿನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಮಗ ಅಭಿಷೇಕ್ ಜೊತೆ ಭೇಟಿ ಕೊಟ್ಟ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಲಭೈರವೇಶ್ವರನ ದರ್ಶನ ಪಡೆದು ಸ್ವಾಮೀಜಿಯ ಆಶೀರ್ವಾದ ಪಡೆಯಬೇಕು ಎಂದು ಎರಡು ತಿಂಗಳಿಂದ ಅಂದುಕೊಂಡಿದ್ದೆವು. ಎಲ್ಲರೂ ರಾಜಕೀಯವಾಗಿ ಮೊದಲ ಹೆಜ್ಜೆ ಪಡೆಯಲು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ರಾಜಕೀಯ ಎಂಟ್ರಿ:
ಅಂಬರೀಶ್ ಜೀವನದಲ್ಲಿ ಯಾರೇ ಗೆಲ್ಲಿಸಿದ್ದರೂ, ಸೋಲಿಸಿದ್ದರೂ ಅಭಿಮಾನಿಗಳು ಮಾತ್ರ ಯಾವತ್ತೂ ಅವರ ಜೊತೆಯಲ್ಲಿಯೇ ಇದ್ದರು. ಆ ಅಭಿಮಾನಿಗಳ ಪ್ರೀತಿ, ವಿಶ್ವಾಸ, ಆಸೆ ಏನಿದೆ ಅದನ್ನು ನೆರವೇರಿಸಬೇಕು ಎಂಬ ಆಸೆ ನನಗೂ ಇದೆ. ಯಾಕೆಂದರೆ ಅವರ ಪ್ರೀತಿಯನ್ನು ಬಿಟ್ಟುಕೊಡುವುದಕ್ಕೆ, ಕಳೆದುಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಅವರ ಆಸೆ ಏನಿತ್ತು ಅದಕ್ಕೆ ಸೋಲಾಗಬಾರದು, ಗೆಲುವಾಗಬೇಕು ಎನ್ನುವ ಆಸೆ ನನಗಿದೆ. ಸದ್ಯಕ್ಕೆ ಈ ನಿರ್ಧಾರ ನನ್ನೊಬ್ಬಳ ಕೈಯಲ್ಲಿಲ್ಲ. ಎಲ್ಲರನ್ನೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಬೇಕಿದೆ. ಅದಕ್ಕೂ ಕಾಲಕೂಡಿ ಬರಬೇಕು. ನಾನು ಯೋಚನೆ ಮಾಡಬೇಕು ಎಂದರು.
Advertisement
ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದವರು ಎಂದೇ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ. ಒಂದು ವೇಳೆ ಜೆಡಿಎಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರವಾಗಿ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದ್ದರಿಂದ ಅವರ ಆಸೆಯನ್ನು ನಾನು ಗೆಲ್ಲಿಸುತ್ತೇನೆ ಎಂದು ತಿಳಿಸಿದರು.
Advertisement
ನಾನು ನೋವಿನಲ್ಲಿದ್ದ ಸಮಯದಲ್ಲಿ ಅವರು ನನಗೆ ಸ್ಪಂದಿಸಿದ್ದಾರೆ. ಈಗ ಅವರು ನನ್ನ ಕಡೆಗೆ ನೋಡಿ, ನೀವು ನಮ್ಮ ಜೊತೆ ಇರಬೇಕು ಎಂದು ಹೇಳುತ್ತಿದ್ದಾರೆ. ಅವರ ಆಸೆಗೆ ನಾನು ಸ್ಪಂದಿಸುತ್ತೇನೆ. ಸಮಯ ಬಂದಾಗ ನಾನೇ ಹೇಳುತ್ತೇನೆ. ಆದರೆ ನಾನಾಗಲಿ, ಅಭಿಷೇಕ್ ಆಗಲಿ ಜೀವನ ಪರ್ಯಂತ ಅಭಿಮಾನಿಗಳ ಜೊತೆಯೇ ಇರುತ್ತೇವೆ ಎಂದು ಹೇಳಿದರು. ಆದ್ರೆ ಮಂಡ್ಯ ಗೌಡ್ತಿ ಅಲ್ಲ ಎಂಬ ಹೇಳಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv