ಹಣ ಇರುವ ಕಡೆ ಐಟಿ ದಾಳಿ ಆಗುತ್ತೆ – ಸುಮಲತಾ ಅಂಬರೀಶ್

Public TV
2 Min Read
sumalatha 2

ಮಂಡ್ಯ: ಹಣ ಇರುವ ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡುತ್ತಾರೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಎಂದು ಕೂಡ ಗೊತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

mnd sumalatha 2

ಇದೇ ವೇಳೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಹಣ ಇರುವ ಕಡೆ ಐಟಿ ದಾಳಿ ಆಗುತ್ತದೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಅಂತಲೂ ಜನಕ್ಕೆ ಗೊತ್ತಿದೆ. ಈಗಾಗಲೇ ಅವರದ್ದೇ ಎರಡು ವಿಡಿಯೋ ಬಹಿರಂಗ ಆಗಿದೆ. ಜನರಿಗೆ ಇದರ ಬಗ್ಗೆ ಎಲ್ಲ ಗೊತ್ತಿದೆ ಎಂದು ತಿಳಿಸಿದ್ರು.

ಮಂಡ್ಯದ ವಕೀಲರ ಸಂಘದ ಕಚೇರಿಗೆ ಸುಮಲತಾ ಅಂಬರೀಷ್ ಭೇಟಿ ನೀಡಿ ಬೆಂಬಲ ಕೋರಿದ್ರು. ಈ ವೇಳೆ ಸುಮಲತಾಗೆ ಮೈಸೂರು ಪೇಟಾ ತೊಡಿಸಿ ವಕೀಲರು ಬೆಂಬಲ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಸಮಾವೇಶ ಇಟ್ಟುಕೊಂಡಿದ್ದೇವೆ. ಕಳೆದ ನಾಲ್ಕು ವಾರಗಳ ಅನಿಸಿಕೆಯನ್ನು ಜನರ ಜೊತೆ ಹಂಚಿಕೊಳ್ಳುತ್ತೇವೆ. ಈ ಸಮಾವೇಶ ನಮ್ಮ ಶಕ್ತಿ ಪ್ರದರ್ಶನ ಅಲ್ಲ ಎಂದು ಸ್ಪಷ್ಟಪಡಿಸಿದ್ರು.

lawyer

ಬಿಜೆಪಿ ನಾಯಕರ ಜೊತೆ ಸುಮಲತಾ ಭೇಟಿ ವೀಡಿಯೋ ಬಗ್ಗೆ ಸಿ.ಎಸ್ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ, ಅವರು ಏನ್ ಬೇಕಾದ್ರೂ ಹೇಳುತ್ತಾರೆ. ಏನು ಬೇಕಾದ್ರೂ ಸೃಷ್ಟಿಸುತ್ತಾರೆ. ಏನು ಬೇಕಾದ್ರೂ ಮಾಡಿದ್ರೂ ಚಿಂತೆ ಇಲ್ಲ. ಜನ ಮೋಸ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಚಿವ ಸ್ಥಾನ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಅವರು ಹೀನಾಯ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ ಎಂದರು.

ಸುಮಲತಾ ಪ್ರಚಾರದ ವಾಹನದ ಹತ್ತಿರ ನಾಗಾಸಾಧುಗಳು ಕೂಡ ಇಂದು ಕಾಣಿಸಿಕೊಂಡರು. ಉತ್ತರ ಪ್ರದೇಶದ ವಾಹನದಲ್ಲಿ ಮಂಡ್ಯದ ಕಾಳಿಕಾಂಬ ದೇವಸ್ಥಾನ ಅಂಗಳದಲ್ಲಿ ನಾಗಸಾಧುಗಳು ಬಂದಿಳಿದಿದ್ದಾರೆ. ಪ್ರಚಾರದ ವಾಹನದ ಬಳಿ ವಾಹನ ನಿಲ್ಲಿಸಿ ಸುಮಲತಾ ಬೆಂಬಲಿಗರನ್ನು ಮಾತನಾಡಿಸಿದ್ದಾರೆ.

temple

Share This Article
Leave a Comment

Leave a Reply

Your email address will not be published. Required fields are marked *